ಆನೇಕಲ್‌ನಲ್ಲಿ ಜೀವ ಬೆದರಿಕೆ ಪ್ರಕರಣ – ಪೊಲೀಸ್ ಇಲಾಖೆ ಕ್ರಮಕ್ಕೆ ವಿಳಂಬ, ನ್ಯಾಯಾಲಯದ ಮಧ್ಯಸ್ಥಿಕೆ
ಆನೇಕಲ್, ಜುಲೈ 8,2025:
ಆನೇಕಲ್ ತಾಲೂಕಿನ ಹಾಲೆನಹಳ್ಳಿಯಲ್ಲಿ ಜೀವ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ, ಪೀಡಿತ ವ್ಯಕ್ತಿ ನ್ಯಾಯಾಲಯದ ಮೊರೆಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿಗತ ವಾದ ವೆಂಕಟಾಚಲಯ್ಯ ಬಿನ್ ಲೇಟ್ ಮುತ್ತರಾಯಪ್ಪ ಅವರು, ದಿನಾಂಕ 07-05-2025 ರಂದು ಬೆಳಿಗ್ಗೆ ಸುಮಾರು 10:45 ಗಂಟೆಯ ಸಮಯದಲ್ಲಿ ಹಾಲೆನಹಳ್ಳಿಯಿಂದ ಹೋಗುವಾಗ ಆರೋಪಿ ವೇಣುಗೋಪಾಲ್ ಎಲ್ ಬಿನ್ ಲಕ್ಷ್ಮಯ್ಯ ಎಂಬವರು ದಿನ್ನೂರು ಕ್ರಾಸ್ ಬಳಿ ದಾರಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ “ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೀಡಿತರು ತಮ್ಮ ಮೊಬೈಲ್‌ನಲ್ಲಿ ಈ ಬೆಳವಣಿಗೆಯ ರೆಕಾರ್ಡಿಂಗ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅದೇ ದಿನ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಥಮಿಕ ವರದಿ ದಾಖಲಾಗದೆ ಕೇವಲ NCR (Non-Cognizable Report) ಸಂಖ್ಯೆ 627/2025 ರೂಪದಲ್ಲಿ ದಾಖಲಿಸಲಾಗಿದೆ. ಅನೇಕ ಬಾರಿ ಎಸ್.ಪಿ ಮತ್ತು ಡಿವೈಎಸ್‌ಪಿ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಪೀಡಿತರ ದೂರು.
ಇದರಿಂದ ನಿರಾಶರಾದ ವೆಂಕಟಾಚಲಯ್ಯ ಅವರು ಆನೇಕಲ್ ಮಾನ್ಯ ನ್ಯಾಯಾಲಯದಲ್ಲಿ PCR No. 280/2025 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ಸಿಬ್ಬಂದಿ ಎಚ್.ಸಿ. 714 ಅಜಯ್ ಕುಮಾರ್ ಅವರು ದೂರುನಕವನ್ನು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ.
ಪೀಡಿತರು ತಮ್ಮ ಮನವಿಯಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 351 (ದಾಳಿ), 352 (ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಪ್ರಾರ್ಥಿಸಿದ್ದು, ನ್ಯಾಯಾಲಯವು ಪಿರ್ಯಾದಿಯನ್ನು ಸ್ವೀಕರಿಸಿ ಆನೇಕಲ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ಗೆ ತನಿಖೆ ನಡೆಸುವಂತೆ CrPC ಸೆಕ್ಷನ್ 175 ಅಡಿಯಲ್ಲಿ ಆದೇಶ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ

