ಮದುವೆಯಾಗಿ ಬಿಡುತ್ತೇನೆ” ಎಂಬ ಭರವಸೆಯಿಂದ ದೈಹಿಕ ಶೋಷಣೆ – ಮಹಿಳೆ ಕಾನೂನು ಸಹಾಯಕ್ಕೆ
ಬೆಂಗಳೂರು, ಜುಲೈ 14:2025
ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನು ಮದುವೆಯಾಗುತ್ತೇನೆ ಎಂಬ ಸುಳ್ಳು ಭರವಸೆಯೊಂದಿಗೆ ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡು, ಬಳಿಕ ತಿರಸ್ಕರಿಸಿದ ಘಟನೆ ನಡೆದಿದೆ. ಯುವತಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಧಿಕಾ ಎಂಬುವವರು, ತಿರುಪತಿಯಲ್ಲಿ ವಾಸವಿದ್ದ ಸಮಯದಲ್ಲಿ ಫೇಸ್‌ಬುಕ್‌ನಲ್ಲಿ ಸುರೇಶ್ ಎಂ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಆತನು ತಿರುಪತಿಗೆ ಬಂದು ರಾಧಿಕಾಳ ಪೋಷಕರಿಗೆ ಮದುವೆಯ ಭರವಸೆ ನೀಡಿದ. ಮಾರ್ಚ್ 3, 2024 ರಂದು ರಾಧಿಕಾಳನ್ನು ಬೆಂಗಳೂರಿನ ಜಕ್ಕೂರು ತಲಕಾವೇರಿ ಲೇಔಟ್‌ಗೆ ಕರೆದುಕೊಂಡು ಹೋಗಿ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಮಾಡಿಕೊಂಡಿದ್ದಾನೆ.
ಆ ಸಮಯದಲ್ಲಿ ಆತನು “ನಾನು ಮದುವೆಯಾಗುತ್ತೇನೆ” ಎಂದು ಪುನಃಪುನಃ ಭರವಸೆ ನೀಡುತ್ತಾ ದೈಹಿಕವಾಗಿ ಶೋಷಿಸಿದ್ದಾನೆ. ಆದರೆ, ಕೆಲ ತಿಂಗಳುಗಳ ನಂತರ ಆತನು ತನ್ನ ವಿವಾಹಿತನಾಗಿದ್ದು, ಮಕ್ಕಳೂ ಇದ್ದಾರೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾನೆ. ಜುಲೈ 10 ರಂದು ತಿರುಪತಿಗೆ ಮದುವೆಗೆ ಹೋಗೋಣ ಎಂದು ಕರೆದುಕೊಂಡು ಹೋಗಿ, ಮಧ್ಯದಲ್ಲಿ ತನ್ನ ತಾಯಿಯ ಊರಿಗೆ ತೆಗೆದುಕೊಂಡು ಹೋಗಿ, “ನಾನು ನಿನ್ನನ್ನು ಮದುವೆಯಾಗಲ್ಲ” ಎಂದು ತಿರಸ್ಕರಿಸಿ ತಿರುಗಿ ಹೋಗಿದ್ದಾನೆ.
ಈ ಕುರಿತಾಗಿ ಯುವತಿ ಯಲಹಂಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆರೋಪಿಯಾಗಿ ಎಂ. ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

