ನಕಲಿ ಪರಿಚಯ ನೀಡಿ ನಿವೃತ್ತ ಸಿಐಎಸ್ಎಫ್ ಅಧಿಕಾರಿ ಬಳಿ ₹45,000 ವಂಚನೆ
ಬೆಂಗಳೂರು, ಜುಲೈ 17:2025
ನಗರದಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಬೆಳಕಿಗೆ ಬಂದಿದೆ. ನಿವೃತ್ತ ಸಿಐಎಸ್ಎಫ್ ನೌಕರರೊಬ್ಬರಿಗೆ ತಮ್ಮನ್ನು “ಶರ್ಮ” ಎಂಬ ಸಹೋದ್ಯೋಗಿಯಾಗಿ ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ₹45,000 ವಂಚಿಸಿದ ಘಟನೆ ನಡೆದಿದೆ.
ಪ್ರಕಾಶ್ ಕುಮಾರ್ ನಾಯಕ್ ಅವರು ನೀಡಿದ ಮಾಹಿತಿಯ ಪ್ರಕಾರ, ಜುಲೈ 11 ರಂದು ಸಂಜೆ 10:30 ಗಂಟೆಗೆ ಅವರ ಮೊಬೈಲಿಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನ ಫೋನ್ ಕೆಲಸ ಮಾಡುತ್ತಿಲ್ಲ ಎಂದು ಕಾರಣ ನೀಡಿ ತಕ್ಷಣ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದ. ಆತನು ನೀಡಿದ ಮೊಬೈಲ್ ನಂಬರ್ 8955492652 ಗೆ ಪಿರ್ಯಾದಿದಾರರು ಒಟ್ಟು ₹45,000 ಹಣವನ್ನು ನಾಲ್ಕು ಹಂತಗಳಲ್ಲಿ ಜುಲೈ 12 ರಂದು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿದರು.
ಹಣ ವರ್ಗಾವಣೆಯ ನಂತರ, ಪ್ರಕಾಶ್ ಕುಮಾರ್ ತಮ್ಮ ಖಾತೆ ಪರಿಶೀಲನೆ ನಡೆಸಿದಾಗ ಯಾವುದೇ ಹಣದ ಸ್ವೀಕೃತಿ ಇಲ್ಲದೆ, ಕರೆ ಮಾಡಿದ ನಂಬರ್ ಸ್ವಿಚ್ ಆಫ್ ಆಗಿರುವುದು ತಿಳಿಯಿತು. ಈ ಮೂಲಕ ಇದು ಸೈಬರ್ ಕ್ರೈಮ್ ಎಂದು ಅರಿತ ಅವರು ತಕ್ಷಣವೇ 1930 ತುರ್ತು ನಂಬರ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ.
ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಂಬಂಧಪಟ್ಟ ನಂಬರದ ವಿವರ ಆಧಾರಿತ ತನಿಖೆ ಮುಂದುವರಿದಿದೆ.

