ಅಪರಿಚಿತ ವಾಹನ ಡಿಕ್ಕಿಯಿಂದ ವಿದ್ಯುತ್ ಕಂಬ ಧ್ವಂಸ – ತನಿಖೆಗೆ ನ್ಯಾಯಾಲಯದ ಅನುಮತಿ
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ-ಆನೇಕಲ್ ಮುಖ್ಯರಸ್ತೆಯ ಅರೋಗ್ಯಧಾಮ, ಹೊನ್ನ ಕಳಾಸಾಪುರ ಗೇಟ್ ಬಳಿ ಸ್ಥಾಪಿತವಾಗಿದ್ದ ಬೆಸ್ಕಾಂ ಇಲಾಖೆಯ ಎಫ್-18, 11 ಕೆವಿ ವಿದ್ಯುತ್ ಮಾರ್ಗದ ಕಂಬಗಳಿಗೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು, ಎರಡು ಆರ್.ಆರ್.ಸಿ ವಿದ್ಯುತ್ ಕಂಬಗಳು ಧ್ವಂಸವಾಗಿರುವ ಘಟನೆ ದಿನಾಂಕ 02/06/2025ರಂದು ಮಧ್ಯರಾತ್ರಿ 1.00ರಿಂದ 2.00 ಗಂಟೆಯ ನಡುವೆ ಸಂಭವಿಸಿದೆ.
ಈ ಸಂಬಂಧವಾಗಿ ದಿನಾಂಕ 03/06/2025ರಂದು ಬೆಸ್ಕಾಂ ಇಲಾಖೆಯ ಆನೇಕಲ್ ಉಪವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಸುರೇಶ್ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಈ ಘಟನೆಯಿಂದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ, ಸುರೇಶ್ ರವರು ಅಪಘಾತ ಉಂಟುಮಾಡಿದ ಅಪರಿಚಿತ ವಾಹನದ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಆನೇಕಲ್ ಠಾಣೆಯ ಪೊಲೀಸರು ಇದನ್ನು ಅಸಂಜ್ಞೆಯ ಪ್ರಕರಣವಾಗಿ NCR ನಂ. 736/2025ರಲ್ಲಿ ದಾಖಲು ಮಾಡಿಕೊಂಡಿದ್ದರು. ಆದರೆ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಈ ಪ್ರಕರಣವನ್ನು ಸಂಜ್ಞೆಯ ಪ್ರಕರಣವನ್ನಾಗಿ ಪರಿವರ್ತಿಸಿ ತನಿಖೆ ಆರಂಭಿಸಲು ಮಾನ್ಯ ನ್ಯಾಯಾಲಯದ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ದಿನಾಂಕ 15/07/2025 ರಂದು ಸಂಜೆ 5:30 ಗಂಟೆಗೆ ನ್ಯಾಯಾಲಯದ ಅನುಮತಿ ಲಭಿಸಿದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಪ್ರಥಮ ಹಂತದಲ್ಲಿ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಪೊಲೀಸರು ಘಟನಾ ಸ್ಥಳದ ಸಿಸಿ ಟಿವಿ ಫುಟೇಜ್ ಪರಿಶೀಲನೆ ಹಾಗೂ ಸಾಕ್ಷ್ಯ ಸಂಗ್ರಹದ ಕಾರ್ಯದಲ್ಲಿ ತೊಡಗಿದ್ದು, ಅಪರಿಚಿತ ವಾಹನ ಹಾಗೂ ಅದರ ಚಾಲಕರ ಪತ್ತೆಗೆ ಶೋಧ ಕಾರ್ಯ ಜಾರಿಯಲ್ಲಿದೆ.

