ನೆಲಗದರನಹಳ್ಳಿಯಲ್ಲಿ ಸ್ಕೂಟರ್-ಕ್ಯಾಂಟರ್ ಅಪಘಾತ: ಬ್ಯಾಂಕ್ ಉದ್ಯೋಗಿಗೆ ಗಂಭೀರ ಗಾಯ
ನಗರದ ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯೂನಿಯನ್ ಬ್ಯಾಂಕ್ನ ಉದ್ಯೋಗಿಯಾಗಿರುವ ಮಂಜ ಕೆ.ಎಚ್ (45) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಜುಲೈ 24 ರಂದು ಸಂಜೆ 8:30ರ ಸುಮಾರಿಗೆ ಸೈಂಟ್ ಪೌಲ್ ಕಾಲೇಜ್ ಸಮೀಪ ಸಂಭವಿಸಿದೆ.
ಘಟನೆಯ ವಿವರಗಳ ಪ್ರಕಾರ, ಮಂಜ ಅವರು ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್ (ನಂ: KA-41-EZ-2167)ನಲ್ಲಿ ನೆಲಗದರನಹಳ್ಳಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-4 ಕಡೆಗೆ ಸಾಗುತ್ತಿದ್ದರು. ಈ ವೇಳೆ ತಮ್ಮ ಮುಂದೆ ಸಾಗುತ್ತಿರುವ ಕ್ಯಾಂಟರ್ ವಾಹನ (ನಂ: KA-51-AF-7407)ವನ್ನು ಬಲಭಾಗದಿಂದ ಓವರ್ಟೇಕ್ ಮಾಡುವ ಯತ್ನದಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು, ಕ್ಯಾಂಟರ್ನ ಹಿಂಭಾಗದ ಚಕ್ರಕ್ಕೆ ಢಿಕ್ಕಿಯಾದರು.
ಘಟನೆಯಾಗುವ ವೇಳೆ ತುಂತುರು ಮಳೆ ಬೀಳುತ್ತಿದ್ದ ಕಾರಣ, ರಸ್ತೆಯ ಮೇಲ್ಮೈ ಜರಗುವಂತೆ ಆಗಿತ್ತು ಎನ್ನಲಾಗಿದೆ. ಅಪಘಾತದ ಪರಿಣಾಮವಾಗಿ ಮಂಜ ಅವರಿಗೆ ಎಡ ಕೈ, ಎಡ ಕಾಲು ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಸಾರ್ವಜನಿಕರ ಸಹಾಯದಿಂದ ಕ್ಯಾಂಟರ್ ಚಾಲಕ ಜಾಫರ್ ಅವರು ಗಾಯಾಳುವನ್ನು ತಕ್ಷಣವೇ ಪ್ರಕ್ರಿಯಾ ಆಸ್ಪತ್ರೆಗೆ ಸೇರಿಸಿದ್ದಾಗಿ ತಿಳಿದುಬಂದಿದೆ.
ಮಂಜ ಅವರ ಪತ್ನಿ ವರಲಕ್ಷ್ಮೀ ಅವರು ಠಾಣೆಗೆ ದೂರು ನೀಡಿದ್ದು, ಸಂಬಂಧಿತ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

