ಜಮೀನು ವಿವಾದ ಹಿನ್ನೆಲೆ ಗಲಾಟೆ: ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಗದಲ್ಲಿ ಜೆ.ಸಿ.ಬಿ. ಕೆಲಸ – ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ
ತಿಪ್ಪಸಂದ್ರ, ಜುಲೈ 29:
ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ತಿಪ್ಪಸಂದ್ರ ಗ್ರಾಮದ ಸರ್ವೆ ನಂಬರ್ 71 ರಲ್ಲಿನ 3.24 ಎಕರೆ ಜಮೀನಿಗೆ ಸಂಬಂಧಿಸಿದ ಖಾತೆಯ ವಿವಾದ ಪ್ರಕರಣ ಮತ್ತೊಮ್ಮೆ ಗಂಭೀರ ತಿರುವು ಪಡೆದಿದೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ಭಾಗಹಕ್ಕಿಗಾಗಿ ರತ್ನಮ್ಮನವರ ಕುಟುಂಬ ಆನೇಕಲ್ ಸಿವಿಲ್ ನ್ಯಾಯಾಲಯದಲ್ಲಿ OS ನಂ. 498/2025 ಮೂಲಕ ದಾವೆ ಹೂಡಿದ್ದು, ತಡೆಯಾಜ್ಞೆ ಪಡೆಯಲಾಗಿತ್ತು.
ರತ್ನಮ್ಮನವರು ನೀಡಿದ ಮಾಹಿತಿಯಂತೆ, ಈ ಜಮೀನಿಗೆ ಸಂಬಂಧಿಸಿದಂತೆ ತಿಗಳಚೌಡದೇನಹಳ್ಳಿಯ ಟಿ.ವಿ. ಬಾಬು, ತಿಪ್ಪಸಂದ್ರದ ಸುರೇಶ್ ಹಾಗೂ ಇತರರು, ಬಿಲ್ವರ್ ವಿವೇಕ್ ಗಾರ್ಗ್ ಪರವಾಗಿ ತಕರಾರು ತಂದು, ದಿನಾಂಕ 26-07-2025 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಜಮೀನಿಗೆ ಜೆ.ಸಿ.ಬಿ. ಯಂತ್ರಗಳನ್ನು ತಂದು ಜಮೀನನ್ನು ಸಮಕರಿಸುತ್ತಿದ್ದರು.
ಈ ದೃಶ್ಯವನ್ನು ನೋಡಿ ಪ್ರಶ್ನಿಸಿದಾಗ ಟಿ.ವಿ. ಬಾಬು ಅವರು ಬಾಯಿಗೆ ಬಂದಂತೆ ನಿಂದಿಸಿ, ಕೈಗಳಿಂದ ಹಲ್ಲೆ ಮಾಡಿ, ಎಳೆದಾಡಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಅವರ ಮಗ ತೇಜಸ್ ಸ್ಥಳಕ್ಕೆ ಬಂದು ತಡೆಯಾಜ್ಞೆ ವಿಚಾರಿಸಿದಾಗ, ಟಿ.ವಿ. ಬಾಬು ಅವರು ತೇಜಸ್ ಗೆ “ನಿನ್ನನ್ನು ಬಿಟ್ಟು ಬಿಡೋದಿಲ್ಲ, ಸಾಯಿಸುತ್ತೇನೆ” ಎಂದು ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಸುರೇಶ್ ಮತ್ತು ಇನ್ನಿತರರು ಸಹ ತೇಜಸ್ ಮತ್ತು ಗೀತಾ ಅವರನ್ನು ಜಮೀನಿಗೆ ಬರದಂತೆ ತಳ್ಳಿದಂತೂ ದೂರಿನಲ್ಲಿದೆ.
ರತ್ನಮ್ಮನವರ ಮಗಳು ಗೀತಾ ಈ ಘಟನೆಯ ವಿಡಿಯೋ ಮಾಡುತ್ತಿದ್ದಾಗ, ಟಿ.ವಿ. ಬಾಬು ಅವರು ಅವಳ ಮೊಬೈಲ್ ಕಿತ್ತುಕೊಂಡು ನಿಂದನೆ ಮಾಡಿದರೆಂದು ಹೇಳಲಾಗಿದೆ. ಹಲ್ಲೆಯಿಂದಾಗಿ ಎಡಭುಜದ ಗಾಯದಿಂದ ಬಳಲುತ್ತಿದ್ದು, ಅವರ ಮಕ್ಕಳು ಅವರನ್ನು ಸರ್ಜಾಪುರ ಟೌನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

