ಬಾಡಿಗೆ ಮನೆ ವಿವಾದ – ದಂಪತಿಗೆ ಹಲ್ಲೆ, ಬೆದರಿಕೆ
ದೊಡ್ಡಬಳ್ಳಾಪುರ: ಆಗಸ್ಟ್ 11 2025
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿಗೆ ಮನೆ ಮಾಲೀಕರು ಹಾಗೂ ಸಹಚರರು ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ ಘಟನೆ ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎ.ಎಲ್. ಗಾಯತ್ರಿ ಅವರು ನೀಡಿದ ದೂರಿನ ಪ್ರಕಾರ, 2023ರಿಂದ ಶಿವಣ್ಣ ಎಂಬುವವರ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸುತ್ತಿದ್ದರು. 2024ರಲ್ಲಿ ಪತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮೂರು ತಿಂಗಳು ಬಾಡಿಗೆ ಪಾವತಿಸಲು ವಿಳಂಬವಾಯಿತು. ಇದರಿಂದ ಆಕ್ರೋಶಗೊಂಡ ಮನೆ ಮಾಲೀಕರು ಶಿವಣ್ಣ ಮತ್ತು ರವಿಕುಮಾರ್ ಅವರು ಮನಗೆ ಬೀಗ ಹಾಕಿ, ಬೈದು, ದೈಹಿಕ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ.
ಗೋವಿಂದ ಎಂಬುವವರ ಸಹಾಯದಿಂದ ರೌಡಿಗಳನ್ನು ಕರೆಸಿ, ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಮನೆಯಲ್ಲಿದ್ದ ₹60,000 ನಗದು, ಬಂಗಾರದ ಒಲೆ, ಬಟ್ಟೆಗಳು ಹಾಗೂ ಅಡುಗೆ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜನಕುಂಟೆ ಪೊಲೀಸರು ಆರೋಪಿಗಳಾದ ಶಿವಣ್ಣ, ರವಿಕುಮಾರ್ ಹಾಗೂ ಗೋವಿಂದ ವಿರುದ್ಧ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

