ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ಯತ್ನ
ಬೆಂಗಳೂರು: ಆಗಸ್ಟ್ 12 2025
ಚಿಕ್ಕ ಬೆಟ್ಟಹಳ್ಳಿ ಗ್ರಾಮದಲ್ಲಿ ನಿವೇಶನ ಸಂಖ್ಯೆ 8ನ್ನು ನಕಲಿ ದಾಖಲೆ ಮೂಲಕ ಕಬಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪೀಡಿತ ರಮೇಶ್ ಅವರು 2017ರಲ್ಲಿ ನಿವೇಶನವನ್ನು ಕಾನೂನುಬದ್ದವಾಗಿ ಖರೀದಿ ಮಾಡಿ, ಶೆಡ್ ನಿರ್ಮಿಸಿ ವಾಸಿಸುತ್ತಿದ್ದರು. ಆದರೆ ಕೆ. ವೇಣುಗೋಪಾಲ್ ಎಂಬಾತ, ನಕಲಿ ಕೆ. ನಾಗರಾಜ್ ಮತ್ತು ಜಯಲಕ್ಷ್ಮಿ ಎಂದು ತೋರಿಸಿದವರ ಸಹಾಯದಿಂದ 2015ರಲ್ಲಿ ನಕಲಿ ಗಿಫ್ಟ್ ಡೀಡ್ ಸೃಷ್ಟಿಸಿ, ಅದನ್ನು ಎ. ಅಮರನಾಥ ರೆಡ್ಡಿಗೆ ಹಸ್ತಾಂತರ ಮಾಡಿದ್ದಾನೆ.
ಅಮರನಾಥ ರೆಡ್ಡಿ ಆ ನಕಲಿ ದಾಖಲೆ ಆಧರಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಲ್ಲಿ ಸಾಲ ಪಡೆದಿದ್ದಾನೆ. ಬ್ಯಾಂಕ್ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡದೇ ಸಾಲ ನೀಡಿರುವ ಆರೋಪ ಇದೆ.
ಪೀಡಿತರು ಆರೋಪಿಗಳೊಂದಿಗೆ ಬ್ಯಾಂಕ್ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

