ಬೆಂಗಳೂರು: ಯಲಹಂಕದಲ್ಲಿ ವ್ಯಾಪಾರಿಯ ಮೇಲೆ ಗುಂಪು ದಾಳಿ – ಜೀವ ಬೆದರಿಕೆ ಆರೋಪ
ಬೆಂಗಳೂರು 20 ಆಗಸ್ಟ್ 2025
ಯಲಹಂಕದ ಭದ್ರಪ್ಪ ಲೇಔಟ್‌ನಲ್ಲಿ ಗುಂಪು ದಾಳಿಯ ಪ್ರಕರಣ ಬೆಳಕಿಗೆ ಬಂದಿದೆ.
ಮಟನ್ ಶಾಪ್ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಆಗಸ್ಟ್ 17ರಂದು ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಶೋಭಾ ತುಲೀಪ್ ಹೋಟೆಲ್ ಎದುರು ನವೀದ್ ಮಟನ್ ಕಾಪ್ ಅಂಗಡಿಯನ್ನು ಮುಚ್ಚಿ ಹತ್ತಿರದ ಎನ್‌ಟಿಐ ಮೈದಾನಕ್ಕೆ ತೆರಳಿದ್ದ ವೇಳೆ, ಸುಮಾರು 10–12 ಜನರ ಗುಂಪು ತಡೆದಿದ್ದು, ಮೂವರು ಅಪರಿಚಿತ ಯುವಕರು ಹಠಾತ್ ವಾಗ್ವಾದ ಆರಂಭಿಸಿದ್ದಾರೆ.
ನವೀದ್ ಪಾಷಾ ಅವರ ಪ್ರಕಾರ, ಆ ಯುವಕರು ವಿಳಾಸ ಕೇಳಿ ಕಿರಿಕಿರಿ ಮಾಡಿದ್ದು, ಬಳಿಕ ದೈಹಿಕ ದಾಳಿ ನಡೆಸಿದ್ದಾರೆ. ಮುಖ ಹಾಗೂ ಮೈಮೇಲೆ ಕೈಗಳಿಂದ ಹೊಡೆದು ಬೈಯುತ್ತಿರುವ ಸಂದರ್ಭದಲ್ಲಿ, ದೂರುದಾರರ ತಮ್ಮ ಶಾಹುಲ್ ನವಾಜ್ ಜಗಳ ಬಿಡಿಸಲು ಬಂದಾಗ, ಅವನ ಮೇಲೆಯೂ ಹಲ್ಲೆ ನಡೆಸಲಾಗಿದೆ.
ಇದರ ನಂತರ ಆರೋಪಿಗಳು “ಇವತ್ತು ಬಿಡಿ, ಮುಂದೆ ಕೊಂದು ಬಿಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಹೇಳಲಾಗಿದೆ. ಗಾಯಗೊಂಡ ದೂರುದಾರ ಹಾಗೂ ಅವರ ತಮ್ಮ ಯಲಹಂಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

