ಸುದ್ದಿ 

ಪುತ್ತೂರು ಮೂಲದ ಅಪೂರ್ವ ಕೆ ಭಟ್ ನಿಧನ – 134 ದಿನಗಳ ಕೋಮಾ ಬಳಿಕ ಬದುಕು ಬಿಡಿದ ಯುವತಿ

Taluknewsmedia.com

ಪುತ್ತೂರು ಮೂಲದ ಅಪೂರ್ವ ಕೆ ಭಟ್ ನಿಧನ – 134 ದಿನಗಳ ಕೋಮಾ ಬಳಿಕ ಬದುಕು ಬಿಡಿದ ಯುವತಿ

ಪತಿ ಆಶೀಶ್ ಸರಡ್ಕ ಅವರ ಪ್ರಯತ್ನಗಳಿಗೂ ಅಳೆದು ನಿಲ್ಲದ ದುಃಖದ ಅಂತ್ಯ

ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಳೆದ 134 ದಿನಗಳಿಂದ ಕೋಮಾದಲ್ಲಿದ್ದ ಪುತ್ತೂರು ಮೂಲದ ಅಪೂರ್ವ ಕೆ ಭಟ್‌ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ.

ಅಪೂರ್ವ ಅವರ ಪತಿ ಆಶೀಶ್‌ ಸರಡ್ಕ ಅವರು ಪತ್ನಿಯ ಬದುಕಿಗಾಗಿ ಅತೀವ ಪ್ರಯತ್ನ ನಡೆಸಿದ್ದರು. ಬೆಂಗಳೂರಿನ ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಸುವುದರ ಜೊತೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನೂ ನೆರವೇರಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ “ಅಪೂರ್ವ ಬದುಕಿ ಬರಲಿ” ಎಂದು ಪ್ರಾರ್ಥನೆಗೆ ಮನವಿ ಮಾಡಿಕೊಂಡು ಅನೇಕ ಜನರ ಸಹಾನುಭೂತಿಯನ್ನು ಗಳಿಸಿದ್ದರು.

ಆದರೆ ಎಲ್ಲ ಪ್ರಯತ್ನಗಳ ನಡುವೆಯೂ ಅಪೂರ್ವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಇಂದು ಸಂಜೆ 6 ಗಂಟೆಗೆ ಅವರು ಅಂತಿಮ ಉಸಿರೆಳೆದಿದ್ದಾರೆ ಎಂದು ಪತಿ ಆಶೀಶ್‌ ಸರಡ್ಕ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

ಅಪೂರ್ವ ಕೆ ಭಟ್‌ ಪುತ್ತೂರಿನವರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅವರು ಆಶೀಶ್‌ ಸರಡ್ಕರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹಾಗೂ ಕುಟುಂಬವು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಮೆಸ್ಸಿ ಬಸ್‌ ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು. ಅಪೂರ್ವ ತೀವ್ರ ಗಾಯಗೊಂಡು ಆಗಿನಿಂದಲೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕೋಮಾದಲ್ಲಿದ್ದ ಅಪೂರ್ವ ಅವರ ಪ್ರಾಣ ಉಳಿಯದೇ ಮಂಗಳವಾರ ನಿಧನರಾದರು. ಕೇವಲ 32ರ ಹರೆಯದಲ್ಲೇ ಇಹಲೋಕ ತ್ಯಜಿಸಿರುವ ಅಪೂರ್ವ ಅವರ ನಿಧನಕ್ಕೆ ಪುತ್ತೂರು ಹಾಗೂ ಮಂಗಳೂರಿನ ಪ್ರದೇಶಗಳಲ್ಲಿ ದುಃಖದ ಛಾಯೆ ಆವರಿಸಿದೆ.

Related posts