ರಾಜ್ಯದಲ್ಲಿ ಕನ್ನಡಿಗರ ಹಕ್ಕು, ಹಿತಾಸಕ್ತಿ ರಕ್ಷಣೆಗಾಗಿ ಸಂಘಟಿತರಾದ ಕನ್ನಡ ಪರ ಹೋರಾಟಗಾರರು ಗಾಂಧಿ ಭವನದಲ್ಲಿ ಕನ್ನಡ ಹಿತಾಸಕ್ತಿ ಸಭೆ – ನವೆಂಬರ್ 1ರಂದು ಮಹಾ ಸಭೆಗೆ ತಯಾರಿ
ರಾಜ್ಯದಲ್ಲಿ ಕನ್ನಡಿಗರ ಹಕ್ಕು, ಹಿತಾಸಕ್ತಿ ರಕ್ಷಣೆಗಾಗಿ ಸಂಘಟಿತರಾದ ಕನ್ನಡ ಪರ ಹೋರಾಟಗಾರರು ಗಾಂಧಿ ಭವನದಲ್ಲಿ ಕನ್ನಡ ಹಿತಾಸಕ್ತಿ ಸಭೆ – ನವೆಂಬರ್ 1ರಂದು ಮಹಾ ಸಭೆಗೆ ತಯಾರಿ
ರಾಜ್ಯದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತುವ ಉದ್ದೇಶದಿಂದ, ಇಂದು (ಶನಿವಾರ) ಬೆಂಗಳೂರಿನ ಗಾಂಧಿ ಭವನದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯನ್ನು KRS ಪಕ್ಷದ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು, ಸಂಘ–ಸಂಸ್ಥೆಗಳು ಹಾಗೂ ಕನ್ನಡದ ಬಗ್ಗೆ ಕಾಳಜಿ ಇರುವ ರಾಜಕೀಯ ಪಕ್ಷಗಳು ಸೇರಿ ಆಯೋಜಿಸಿದ್ದವು.
ಸಭೆಯಲ್ಲಿ ದ್ವಿಭಾಷಾ ನೀತಿ ಜಾರಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ನೀರಿನ ಹಂಚಿಕೆ ನ್ಯಾಯ, ತೆರಿಗೆ ಹಂಚಿಕೆಯಲ್ಲಿ ನಡೆಯುತ್ತಿರುವ ಅನ್ಯಾಯ ಮುಂತಾದ ಕನ್ನಡಿಗರ ಹಕ್ಕು–ಹಿತಾಸಕ್ತಿಯ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ನಾಯಕರ ಅಭಿಪ್ರಾಯದಂತೆ, ಕನ್ನಡಿಗರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ನವಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ವೇಳೆ ಸರ್ಕಾರದಿಂದ ಸ್ಪಷ್ಟ ಘೋಷಣೆ ಪಡೆಯಬೇಕು ಎಂದು ಒತ್ತಾಯಿಸಲಾಯಿತು. ಈ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರರ ನಿಯೋಗವೊಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಬೇಡಿಕೆಗಳ ಕುರಿತು ಸ್ಮರಣ ಪತ್ರ ಸಲ್ಲಿಸಲು ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ಅಕ್ಟೋಬರ್ 25ರಂದು ಇನ್ನಷ್ಟು ಕನ್ನಡ ಪರ ಸಂಘಟನೆಗಳು ಮತ್ತು ಹೋರಾಟಗಾರರನ್ನು ಒಳಗೊಂಡು ಮತ್ತೊಂದು ದೊಡ್ಡ ಮಟ್ಟದ ಸಭೆಯನ್ನು ಆಯೋಜಿಸುವ ನಿರ್ಧಾರವೂ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಕನ್ನಡ ಹಿತಾಸಕ್ತಿಯ ಹೋರಾಟಕ್ಕೆ ಅಗತ್ಯವಾದ ಮುಂದಿನ ಕಾರ್ಯತಂತ್ರವನ್ನು ಚರ್ಚಿಸಿ ತೀರ್ಮಾನಿಸಲಾಗುವುದು.
ಈ ಮಹತ್ತರ ಹೋರಾಟದ ಪ್ರಯತ್ನದಲ್ಲಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು, ಹೋರಾಟಗಾರರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡದ ಧ್ವನಿಯನ್ನು ಬಲಪಡಿಸಬೇಕೆಂದು ಸಂಘಟಕರು ವಿನಂತಿಸಿದರು.

