ಸುದ್ದಿ 

ನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ — ನೈಜ ಘಟನೆಯ ಮೇಲೆ ಆಧಾರಿತ ಗಟ್ಟಿಯಾದ ಕಥಾಹಂದರ!

Taluknewsmedia.com

ನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ — ನೈಜ ಘಟನೆಯ ಮೇಲೆ ಆಧಾರಿತ ಗಟ್ಟಿಯಾದ ಕಥಾಹಂದರ!

ನೆಲಮಂಗಲದ ಪೊಲೀಸ್ ಠಾಣೆಯ ಆವರಣದಲ್ಲಿ ಇಂದು ‘ಬೀಟ್ ಪೊಲೀಸ್’ ಚಿತ್ರದ ಭರ್ಜರಿ ಮುಹೂರ್ತ ಕಾರ್ಯಕ್ರಮ ನಡೆಯಿತು.
ಆರ್ಯ ಫಿಲಂಸ್ ಲಾಂಛನದಲ್ಲಿ ಆರ್. ಲಕ್ಷ್ಮಿ ನಾರಾಯಣ ಗೌಡರು ನಿರ್ಮಿಸುತ್ತಿರುವ ಈ ಚಿತ್ರವನ್ನು, ಖ್ಯಾತ ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರು ನಿರ್ದೇಶಿಸುತ್ತಿದ್ದಾರೆ.

ಚಿತ್ರದಲ್ಲಿ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕನಾಗಿ ನಟಿಸುತ್ತಿದ್ದು, “ಭೀಮ” ಚಿತ್ರದ ಮೂಲಕ ಪ್ರಖ್ಯಾತಿಯಾಗಿರುವ ನಟಿ ಪ್ರಿಯಾ ಅವರು ಸಶಕ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಜನಪ್ರಿಯ ನಟ ಡ್ರ್ಯಾಗನ್ ಮಂಜು ಮಿಂಚಲಿದ್ದಾರೆ.

ನಿರ್ಮಾಪಕ ಆರ್. ಲಕ್ಷ್ಮಿ ನಾರಾಯಣ ಗೌಡ ಮಾತನಾಡಿ..
“ಇದು ನಮ್ಮ ಆರ್ಯ ಫಿಲಂಸ್‌ನ ನಾಲ್ಕನೇ ಸಿನಿಮಾ. ನೈಜ ಘಟನೆಯ ಸುತ್ತ ಹೆಣೆದಿರುವ ಈ ಚಿತ್ರದಲ್ಲಿ ಇಂದಿನ ಎಜುಕೇಶನ್ ವ್ಯವಸ್ಥೆಯ ಕುರಿತಾದ ಗಂಭೀರ ಸಂದೇಶವಿದೆ. ಸಮಾಜದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕೆಂಬ ಅರಿವು ಮೂಡಿಸುವ ಉದ್ದೇಶ ನಮ್ಮದು,” ಎಂದು ಹೇಳಿದರು.
ಅವರು ಸ್ವತಃ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್, ಮತ್ತು ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ಸುಮಾರು 25 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ 4 ಹಾಡುಗಳು ಮತ್ತು 4 ಸಾಹಸ ದೃಶ್ಯಗಳು ಇರಲಿವೆ.

ನಾಯಕ ಕೌರವ ವೆಂಕಟೇಶ್ ಅವರು ಹೇಳಿದರು:
“ಈ ಚಿತ್ರದ ಕಥೆ ನಿರ್ಮಾಪಕರದೇ. ನೈಜ ಘಟನೆಗಳ ಸ್ಪರ್ಶವಿರುವ ಈ ಕಥೆಗೆ ನಾವು ಚಿತ್ರರೂಪ ನೀಡಿದ್ದೇವೆ. ರಾಜೇಶ್ ಅವರ ಸಂಗೀತ ಮತ್ತು ಮುಂಜಾನೆ ಮಂಜು ಅವರ ಛಾಯಾಗ್ರಹಣ ಚಿತ್ರಕ್ಕೆ ಜೀವ ತುಂಬಲಿದೆ,” ಎಂದರು.

ನಿರ್ದೇಶಕ ಎಂ.ಆರ್. ಕಪಿಲ್ ವಿವರಿಸಿ…
“ಈ ಕಥೆ ಇಂದಿನ ಶಿಕ್ಷಣ ವ್ಯವಸ್ಥೆಯ ಸತ್ಯಾಸತ್ಯತೆಗಳನ್ನು ಬಹಿರಂಗ ಪಡಿಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳ ಬದುಕಿನಲ್ಲಿ ನಡೆಯುವ ವಂಚನೆ ಮತ್ತು ಅದರ ಪರಿಣಾಮಗಳೇ ಚಿತ್ರದ ಕೇಂದ್ರಬಿಂದು,” ಎಂದು ತಿಳಿಸಿದರು.

ನಟಿ ಪ್ರಿಯಾ ಮಾತನಾಡಿ…
“ನಾನು ಭಾರ್ಗವಿ ಎಂಬ ಡಿಸಿಪಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದು ಸಾಮಾನ್ಯ ಪಾತ್ರವಲ್ಲ — ಬಲವಾದ ಮಹಿಳಾ ಪೊಲೀಸ್ ಅಧಿಕಾರಿಯ ಜೀವನ ಮತ್ತು ತೀರ್ಮಾನಗಳನ್ನು ಚಿತ್ರಿಸುತ್ತದೆ,” ಎಂದರು.
ನಟ ಡ್ರ್ಯಾಗನ್ ಮಂಜು ತಮ್ಮ ಪಾತ್ರದ ಬಗ್ಗೆ,
“ನಾನು ನಕಾರಾತ್ಮಕ ಪಾತ್ರದಲ್ಲಿದ್ದರೂ, ಅದರೊಳಗೆ ಒಂದು ಬದಲಾವಣೆಯ ಕಣವಿದೆ,” ಎಂದು ಹೇಳಿದರು.
ಈ ಚಿತ್ರದಿಂದ ಪ್ರಸ್ತುತ ಸಾಮಾಜಿಕ ಸಮಸ್ಯೆ — “ಎಜುಕೇಶನ್ ಸ್ಕ್ಯಾಮ್” ಕುರಿತು ಪ್ರಬಲ ಸಂದೇಶ ನೀಡಲಾಗುತ್ತಿದೆ. ಹಿಂದೆ ‘ಕೋಲಾರ’ ಚಿತ್ರವನ್ನು ನಿರ್ಮಿಸಿದ್ದ ಆರ್. ಲಕ್ಷ್ಮಿ ನಾರಾಯಣ ಗೌಡ ಅವರಿಂದ ನಿರ್ಮಾಣವಾಗುತ್ತಿರುವ ‘ಬೀಟ್ ಪೊಲೀಸ್’, ಪ್ರೇಕ್ಷಕರ ಮನಸ್ಸು ಗೆಲ್ಲುವ ನಿರೀಕ್ಷೆಯಲ್ಲಿದೆ.

ಚಿತ್ರದ ಪ್ರಮುಖ ತಂಡ:..
ನಿರ್ಮಾಪಕ: ಆರ್. ಲಕ್ಷ್ಮಿ ನಾರಾಯಣ ಗೌಡ
ನಿರ್ದೇಶಕ: ಎಂ.ಆರ್. ಕಪಿಲ್
ನಾಯಕ: ಕೌರವ ವೆಂಕಟೇಶ್
ನಾಯಕಿ: ಪ್ರಿಯಾ (ಡಿಸಿಪಿ ಭಾರ್ಗವಿ)
ಖಳನಾಯಕ: ಡ್ರ್ಯಾಗನ್ ಮಂಜು
ಸಂಗೀತ: ರಾಜೇಶ್
ಛಾಯಾಗ್ರಹಣ: ಮುಂಜಾನೆ ಮಂಜು

Related posts