ಸುದ್ದಿ 

ಭಾರತೀಯರ ಭಾವ ಕೋಶ……

Taluknewsmedia.com

ಭಾರತೀಯರ ಭಾವ ಕೋಶ……

ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?……….

ಪ್ರೀತಿ…….. ಉತ್ತಮ,
ದ್ವೇಷ…….. ಮಧ್ಯಮ,
ಕೋಪ…….. ಸ್ವಲ್ಪ ಹೆಚ್ಚು,
ಕಾಮ…… ಸಮಾಧಾನಕರ,
ಕರುಣೆ…… ಪರವಾಗಿಲ್ಲ,
ತ್ಯಾಗ…….ಸುಮಾರಾಗಿದೆ,
ಧೈರ್ಯ……. ಕಡಿಮೆ,
ಅಹಂಕಾರ…. ಒಂದಷ್ಟುಇದೆ,
ತಾಳ್ಮೆ…… ಸ್ವಲ್ಪ ಕಡಿಮೆ,
ಸಹಕಾರ…. ಓ ಕೆ,
ಭಕ್ತಿ…….. ತುಂಬಾ ಹೆಚ್ಚು,
ನಂಬಿಕೆ…. ಅಪಾರ,
ಹಾಸ್ಯ….. ಉತ್ತಮ,

ಆದರೆ,
ಇದನ್ನೆಲ್ಲಾ ಮೀರಿದ ಅತಿಹೆಚ್ಚು ಭಾವ ,
ನನಗೆ ತಿಳಿದಂತೆ
” ಅಸೂಯೆ “
ಅಥವಾ
” ಮತ್ಸರ “

ಬಹುಶಃ ನಮ್ಮ ರಕ್ತದಲ್ಲಿಯೇ ಅಡಕವಾಗಿರಬೇಕು ಎನಿಸುತ್ತದೆ.

ಮೇಲ್ನೋಟಕ್ಕೆ ಮತ್ತು ನೇರವಾಗಿ ಅದು ಗೋಚರಿಸದಿದ್ದರು ಪರೋಕ್ಷವಾಗಿ ಅದು ತುಂಬಿ ತುಳುಕುತ್ತಿರುತ್ತದೆ.

ಕೆಲವರಿಗೆ ಮುಖದ ಮೇಲೆಯೇ ಕಾಣಿಸಿದರೆ, ಮತ್ತೆ ಕೆಲವರ ನಗುವಿನಲ್ಲಿ ಕಾಣುತ್ತದೆ. ಮತ್ತೆ ಕೆಲವರಲ್ಲಿ ಅವರ ದೇಹ ಭಾಷೆಯಿಂದ, ಅವರ ನಡವಳಿಕೆಯಿಂದ, ಅಪರೂಪವಾಗಿ ಅವರ ಮಾತು ಮತ್ತು ಮೌನದಿಂದ, ಆಗಾಗ ಅವರ ಕಣ್ಣೋಟದಿಂದ, ಇದು ವ್ಯಕ್ತವಾಗುತ್ತದೆ.

ಅಸೂಯೆ ಅಥವಾ ಮಾತ್ಸರ್ಯ ನಮ್ಮ ಸುತ್ತಮುತ್ತಲಿನ ಮತ್ತು ಮುಖ್ಯವಾಗಿ ಹತ್ತಿರದ ವಿವಿಧ ಸಂಬಂಧಗಳ ನಡುವೆಯೇ ಹೆಚ್ಚು ಉಂಟಾಗುತ್ತದೆ. ಹೇಳಲೂ ಆಗದ, ಅನುಭವಿಸಲೂ ಆಗದ ಈ ಮಾನಸಿಕತೆಯನ್ನು ಆಡು ಭಾಷೆಯಲ್ಲಿ ಹೊಟ್ಟೆ ಉರಿ ಎಂದು ಕರೆಯಲಾಗುತ್ತದೆ.

ಅಸೂಯೆಯಿಂದಾಗಿಯೇ ಭಾರತೀಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ‌ಸಾಧ್ಯವಾಗುತ್ತಿಲ್ಲ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದೆ ಅನೇಕ ಪ್ರತಿಭೆಗಳು ನಾಶವಾಗುತ್ತಿವೆ.

ಮಹಿಳೆಯರಲ್ಲಿ ಇದು ಜಾಸ್ತಿ ಎಂದು ಹೇಳಲಾಗುತ್ತದೆ. ಇದಕ್ಕೆ ಅಂಕಿ ಅಂಶಗಳು ಇಲ್ಲ. ಕೇವಲ ಅನುಭವ ಮತ್ತು ಹಿರಿಯರ ಗಾಳಿಮಾತುಗಳೇ ಆಧಾರ.

ನನ್ನನ್ನೂ ಸೇರಿ ಈ ಅಸೂಯೆ ಎಂಬ ಸ್ಥಿತಿಯನ್ನು ಮೀರುವ ಆತ್ಮಸಾಕ್ಷಿಯ ಪ್ರಯತ್ನದ ಅವಶ್ಯಕತೆ ಇದೆ. ನಮ್ಮ ವೈಯಕ್ತಿಕ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಸೂಯೆ ಎಂಬ ಭಾವ ಕಡಿಮೆಯಾದಲ್ಲಿ ನಿಜಕ್ಕೂ ನಮ್ಮ ಪ್ರಬುದ್ದತೆಯ ಮಟ್ಟ ಸಹಜವಾಗಿಯೇ ಹೆಚ್ಚುತ್ತದೆ.
ಈ ಕ್ಷಣದಿಂದಲೇ ಆ ಪ್ರಯತ್ನ ಪ್ರಾರಂಭವಾಗಲಿ ಎಂದು ಆಶಿಸುತ್ತಾ…….

ಹಾಗೆಯೇ,

ಪ್ರೀತಿ – ಭಕ್ತಿ – ಕಾಮ….

ಉತ್ಕರ್ಷ – ಉನ್ಮಾದ -: ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು…..

ಪ್ರೀತಿ – ಭಾವನಾತ್ಮಕ,
ಭಕ್ತಿ – ಭ್ರಮಾತ್ಮಕ,
ಕಾಮ – ದೇಹಾತ್ಮಕ…….

ಪ್ರೀತಿ – ವಾಸ್ತವ,
ಭಕ್ತಿ – ನಂಬಿಕೆ,
ಕಾಮ – ವಾಂಛೆ……..

ಪ್ರೀತಿ × ದ್ವೇಷ,
ಭಕ್ತಿ × ಅಹಂ,
ಕಾಮ × ಸನ್ಯಾಸ……..

ಪ್ರೀತಿ – ಜೀವನೋತ್ಸಾಹ ಮತ್ತು ಮಾರಣಾಂತಿಕ,
ಭಕ್ತಿ – ನಂಬಿಕೆ ಮತ್ತು ಅರ್ಪಣೆ,
ಕಾಮ – ಸುಖ ಮತ್ತು ಸಂಘರ್ಷ……….

ಪ್ರೀತಿ ಭಕ್ತಿ ಕಾಮ ಆಂತರಿಕವಾದದ್ದು,
ಆದರೆ ಬಾಹ್ಯ ಒತ್ತಡ ಮತ್ತು ನಿಯಂತ್ರಣಗಳದೇ ಬಹುಮುಖ್ಯ ಪಾತ್ರ………

ಪ್ರೀತಿ ಭಕ್ತಿ ಕಾಮಕ್ಕಾಗಿ ಎಂತಹ ತ್ಯಾಗಕ್ಕೂ ಬದ್ದ
ಮತ್ತು ಎಂತಹ ಸ್ವಾರ್ಥಕ್ಕೂ ಸಿದ್ದ……….

ಸಂಗೀತ, ಸಾಹಿತ್ಯ, ಸಿನಿಮಾ ಕಲೆಗಳ ಜೀವ ದ್ರವ್ಯ ಪ್ರೀತಿ ಭಕ್ತಿ ಕಾಮ………

ವಿನಾಶದ ವಿಕೃತಿಯ ಪರಾಕಾಷ್ಠೆ ಪ್ರೀತಿ, ಭಕ್ತಿ, ಕಾಮ………

ಬದುಕು ಕಟ್ಟಲು ಪ್ರೇರಣ,
ಬದುಕು ಮುಗಿಸಲು ಕಾರಣ,
ಪ್ರೀತಿ ಭಕ್ತಿ ಕಾಮ……..

ಪ್ರೀತಿ ಭಕ್ತಿ ಕಾಮಕ್ಕೆ ಗಡಿ ಭಾಷೆ ಧರ್ಮಗಳಿಲ್ಲ,
ಆದರೆ ಧರ್ಮಗಳೇ ಅವುಗಳಿಗೆ ಗಡಿ ನಿರ್ಮಿಸಿವೆ……

ಪ್ರೀತಿಗಾಗಿ ಆತ್ಮಹತ್ಯೆ,
ಭಕ್ತಿಗಾಗಿ ಶರಣಾಗತಿ,
ಕಾಮಕ್ಕಾಗಿ ಕೊಲೆಪಾತಕಿ………

ಪ್ರೀತಿ – ಸುಂದರ,
ಭಕ್ತಿ – ನಿಷ್ಕಲ್ಮಶ,
ಕಾಮ – ತೃಪ್ತಿ…..

ಪ್ರೀತಿ ಬಯಸುವ ಸಮಾಜ,
ಭಕ್ತಿ ಬಯಸುವ ಧರ್ಮ,
ಕಾಮ ಬಯಸುವ ದೇಹ……

ಯೋಚಿಸಿದಂತೆಲ್ಲಾ ಹೊಳೆಯುವ,
ಅನುಭವಿಸಿದಂತೆಲ್ಲಾ ಬೆಳೆಯುವ,
ಕ್ರಮಿಸಿದಂತೆಲ್ಲಾ ತೆರೆಯುವ
ಪ್ರೀತಿ, ಭಕ್ತಿ, ಕಾಮ……..

ಇವುಗಳ ಅನುಭವಿಸುವಿಕೆ,
ಇವುಗಳ ತೃಪ್ತಿ ಪಡಿಸುವಿಕೆ,
ಇವುಗಳ ನಿಯಂತ್ರಣವೇ ಬದುಕು…….

ಮಡಿವಂತಿಕೆಯೂ ಬೇಡ,
ಮುಕ್ತತೆಯೂ ಬೇಡ,
ಸಹಜ – ಸಾಮಾನ್ಯ ಜ್ಞಾನ ಬಯಸುವ
ಪ್ರೀತಿ, ಭಕ್ತಿ, ಕಾಮ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

Related posts