ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………
ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………
ಇದು ನಿಜವೇ, ಆರೋಪ ಮಾತ್ರವೇ,
ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ…..
ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರೇಷ್ಠ ಎಂಬ ಮನೋಭಾವ ಬೆಳೆಸಿ, ಜೊತೆಗೆ ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆ ಮೂಡಿಸಿ ಅದರ ನಾಶಕ್ಕೆ ಪ್ರಯತ್ನಿಸುತ್ತಾ ಇರುವ ಧಾರ್ಮಿಕ ಮುಖಂಡರುಗಳು ಹೆಚ್ಚಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟ. ಭಾರತದಲ್ಲಿ ರಾಜಕೀಯ ಕಾರಣದಿಂದಾಗಿ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿದೆ.
ಲವ್ ಜಿಹಾದ್ ಎಂಬುದು ನನಗೆ ಅರ್ಥವಾಗಿರುವುದೇನೆಂದರೆ ,
ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಅಥವಾ ಪ್ರೀತಿಯ ನಾಟಕವಾಡಿ ಅವರನ್ನು ಮದುವೆಯಾಗಿ, ಅವರನ್ನು ಮತ್ತು ಅವರ ಮಕ್ಕಳನ್ನು ಇಸ್ಲಾಮೀಕರಣ ಮಾಡಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಒಳಸಂಚು ಎಂದು.
ಇದು ನಿಜವೇ ಅಥವಾ ಹಿಂದೂ ಮೂಲಭೂತವಾದಿಗಳ ಕುತಂತ್ರ ಆರೋಪವೇ ಅಥವಾ ಓಟ್ ಬ್ಯಾಂಕಿನ ರಾಜಕೀಯವೇ ?
ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಏಕೆಂದರೆ ಪ್ರೀತಿ ಮತ್ತು ಅಪರಾಧಗಳು ಸಾಮಾನ್ಯ ಗ್ರಹಿಕೆಗೆ ಸ್ಪಷ್ಟವಾಗಿ ನಿಲುಕುವುದಿಲ್ಲ.
ನಿಜವಾಗಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧ ಮತ್ತು ದೇಶದ್ರೋಹ ಹಾಗು ಮಾನವ ದ್ರೋಹ. ಸುಳ್ಳಾಗಿದ್ದಲ್ಲಿ ಆ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ತಮ್ಮ ಸ್ವಾರ್ಥ ಸಾಧನೆಗೆ ದೇಶ ಮತ್ತು ಧರ್ಮವನ್ನು ಉಪಯೋಗಿಸಿಕೊಳ್ಳುವವರೂ ದೇಶ ಮತ್ತು ಧರ್ಮ ದ್ರೋಹಿಗಳೇ.
ಆದರೆ ಮುಖ್ಯ ಪ್ರಶ್ನೆ ಎಂದರೆ……,.
ಭಾರತೀಯ ಹಿಂದೂ ಯುವತಿಯರು ಪ್ರೀತಿಯ ನಾಟಕವಾಡುವ ವ್ಯಕ್ತಿಗಳ ಆಕರ್ಷಣೆಗೆ ಸುಲಭವಾಗಿ ಬಲಿಯಾಗುವಷ್ಟು ದುರ್ಬಲರೇ ? ಅಥವಾ ನಮ್ಮ ಸಾಮಾಜಿಕ ವ್ಯವಸ್ಥೆ ನಮ್ಮ ಹೆಣ್ಣುಮಕ್ಕಳನ್ನು ಅಷ್ಟೊಂದು ಕೆಳಮಟ್ಟದಲ್ಲಿ ಬೆಳೆಸಿದೆಯೇ ? ಅಥವಾ ನಿಜ ಪ್ರೀತಿ ಮತ್ತು ಕಪಟತೆ ಅರಿಯದಷ್ಟು ಮುಗ್ಧರೇ ? ಅಥವಾ ಮಾತು, ರೂಪ, ಬಟ್ಟೆ, ಕಾರು, ಹಣದ ಆಸೆಗೆ ಸುಲಭವಾಗಿ ಮರುಳಾಗುವ ಚಂಚಲೆಯರೆ ? ( ಬಲವಂತವಾಗಿ ಅಥವಾ ಒತ್ತಾಯಪೂರ್ವಕವಾಗಿ ಪ್ರಯತ್ನಿಸುವುದು ಅತ್ಯಾಚಾರಕ್ಕೆ ಸಮ. ಅದು ಈ ವ್ಯಾಪ್ತಿಗೆ ಒಳಪಡುವುದಿಲ್ಲ)
ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ……….
ಮೂಲಭೂತವಾಗಿ ಭಾರತದ ಎಲ್ಲಾ ವರ್ಗದ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ಪ್ರೀತಿಗೆ ಅತ್ಯುನ್ನತ ಸ್ಥಾನವಿದೆ. ಪ್ರೀತಿ ಮಾಡುವುದಲ್ಲ ಅದು ಆಗುವುದು – ತನಗರಿವಿಲ್ಲದೆ ಘಟಿಸುವುದು, ಅನುಭವಿಸುವುದು.
ಪ್ರೀತಿ ಎಂಬುದು ಪ್ರೀತಿ, ಪ್ರೇಮ, ಪ್ರಣಯ, ತ್ಯಾಗ, ಸಹಕಾರ, ಆಕರ್ಷಣೆ, ಅವಲಂಬನೆ, ಹೊಂದಾಣಿಕೆ, ಜವಾಬ್ದಾರಿ ಮುಂತಾದ ಅನೇಕ ಅಂಶಗಳ ಹೃದಯದ ಭಾಷೆ, ಭಾವನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಸಮ್ಮಿಲನ.
ಕೇವಲ ಹಣ, ಅಧಿಕಾರ, ಸೌಂದರ್ಯ, ಮಾತಿನ ಕಲೆಗಾರಿಕೆ ಮುಂತಾದವುಗಳಿಗೆ ಒಲಿಯುವುದು ಒಂದು ಮೋಹವೇ ಹೊರತು ನಿಜ ಪ್ರೀತಿಯಲ್ಲ….
ಚೆಂಡು ಈಗ ನಮ್ಮ ಅಂಗಳದಲ್ಲೇ ಇದೆ, ನಾವೇ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು….
ಪ್ರೀತಿಸುವ ಮನಸ್ಸುಗಳನ್ನು ಮುಗ್ಧ ಮನಸ್ಸು ಎಂದು ಸಮಾಧಾನ ಮಾಡಿಕೊಳ್ಳಬಾರದು. ಅದು ಆಸೆ, ಅಜ್ಞಾನ, ಆಕರ್ಷಣೆ ಅಥವಾ ನಿಜ ಪ್ರೀತಿಯೇ ಆಗಿರಬೇಕೆ ಹೊರತು ಮುಗ್ಧತೆಯಲ್ಲ.
ಒಂದುವೇಳೆ ಲವ್ ಜಿಹಾದ್ ಶತ್ರುಗಳ ಪ್ರಬಲ ಅಸ್ತ್ರವೇ ಆಗಿದ್ದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ದೃಢವಾಗಿದ್ದಲ್ಲಿ ಭಯಪಡುವ ಅವಶ್ಯಕತೆಯೇ ಇಲ್ಲ. ಬಲವಂತವಾದಲ್ಲಿ ಮಾತ್ರ ಅದು ಕಾನೂನು ಸುವ್ಯವಸ್ಥೆಯ ಸಮಸ್ಯೆ.
ಅದಕ್ಕಾಗಿ ಎಲ್ಲಾ ಮುಸ್ಲಿಮರನ್ನು ತೆಗಳಿ ಅವರನ್ನು ಮುಖ್ಯವಾಹಿನಿಯಿಂದ ದೂರತಳ್ಳಿ ಮತ್ತಷ್ಟು ಅವಮಾನಕ್ಕೀಡುಮಾಡುವುದೂ ಸರಿಯಲ್ಲ. ಧರ್ಮಕ್ಕಾಗಿ
ಎಳೆಯ ಪ್ರೀತಿಯ ಮನಸ್ಸುಗಳನ್ನು ನೋಯಿಸುವುದು ತರವಲ್ಲ.
ಪ್ರೀತಿಯನ್ನು ಪ್ರೀತಿಯಾಗೇ ಉಳಿಸಿಕೊಳ್ಳಲು ಭಾರತೀಯ ಮನಸ್ಸುಗಳು ಪಣ ತೊಡೋಣ.
ಎಲ್ಲಾ ಧರ್ಮಗಳ ಮೂಲಭೂತವಾದಿ ಕ್ರೂರಿಗಳ ಕೈಯಲ್ಲಿ ಪ್ರೀತಿ ಬಂಧಿಯಾಗಿ ನಲುಗದಂತೆ ನೋಡಿಕೊಳ್ಳೋಣ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

