ಸುದ್ದಿ 

ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ

Taluknewsmedia.com

ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ

ನಂಜನಗೂಡು: ಪತಿಯನ್ನ ಕೊಲ್ಲಲು ಪತ್ನಿಯೇ ಸ್ಕೆಚ್ ಹಾಕಿ, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಪೊಲೀಸರ ಸೂಕ್ಷ್ಮ ತನಿಖೆಯಿಂದ ಸಿಕ್ಕಿಬಿದ್ದ ಈ ಕಿಲಾಡಿ ಪತ್ನಿಯ ಆಟ ಇದೀಗ ಎಲ್ಲರ ಚರ್ಚೆಗೆ ಕಾರಣವಾಗಿದೆ.

ಪತಿಯನ್ನ ಮುಗಿಸಲು ಪತ್ನಿ ತನ್ನ ಸಹೋದರನ ಸಹಾಯದಿಂದ ಸಂಚು ರೂಪಿಸಿದ್ದಾಳೆ. ಆದರೆ ನಂಜನಗೂಡು ಠಾಣೆ ಪೊಲೀಸರು ಬಲವಾದ ಸುಳಿವುಗಳ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪತ್ನಿ ಸಂಗೀತಾ, ಆಕೆಯ ಸಹೋದರ ಸಂಜಯ್, ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕ — ಈ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಪತಿಯನ್ನ ಕೊಲ್ಲಲು ಸಂಚು ರೂಪಿಸಿದರೂ, ಯೋಜನೆ ಪೂರ್ಣವಾಗಿ ಸಫಲವಾಗಲಿಲ್ಲ. ಗಾಯಗೊಂಡ ಪತಿ ರಾಜೇಂದ್ರ ಪ್ರಸ್ತುತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜೇಂದ್ರ ಅವರು ಫೈಬರ್ ಡೋರ್ ಫಿಟ್ ಮಾಡುವ ವ್ಯವಹಾರದಲ್ಲಿದ್ದರು. ಪತ್ನಿ ಸಂಗೀತಾ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ದೀರ್ಘಕಾಲದಿಂದ ದಂಪತಿಗಳ ಮಧ್ಯೆ ಗೃಹಕಲಹ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಪತಿಯನ್ನ ಮುಗಿಸಲು ಪತ್ನಿ ಕ್ರೂರ ಯೋಚನೆ ಮಾಡಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 25ರಂದು ಸಂಜೆ ರಾಜೇಂದ್ರ ಮತ್ತು ಸಂಗೀತಾ ಇಬ್ಬರೂ ಸ್ಕೂಟರ್‌ನಲ್ಲಿ ನಂಜನಗೂಡಿನ ಮುಡಾ ಲೇಔಟ್ ಭಾಗಕ್ಕೆ ತೆರಳುತ್ತಿದ್ದಾಗ ಕಾರು ಅಡ್ಡವಾಗಿ ನಿಂತಿತು. ಅದರಿಂದ ಉಂಟಾದ ಘರ್ಷಣೆಯಲ್ಲಿ ಇಬ್ಬರೂ ಕೆಳಗೆ ಬಿದ್ದರು. ಇದೇ ವೇಳೆ ಕಾರಿನಲ್ಲಿ ಇದ್ದವರು ದರೋಡೆ ಸನ್ನಿವೇಶ ಸೃಷ್ಟಿಸಿ, ರಾಜೇಂದ್ರ ಮೇಲೆ ಡ್ರಾಗರ್‌ನಿಂದ ಇರಿತ ನಡೆಸಿದರು.

ಆದರೆ ಆ ಕ್ಷಣದಲ್ಲೇ ಹತ್ತಿರ ಬಂದ ವಾಹನದ ಬೆಳಕಿನಿಂದ ಸಂಚು ವಿಫಲವಾಯಿತು. ಗಾಯಗೊಂಡ ರಾಜೇಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ಡಿವೈಎಸ್ಪಿ ರಘು ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಯಿತು.

ಸಿಸಿ ಕ್ಯಾಮೆರಾ ದೃಶ್ಯ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಸಂಗೀತಾಳ ಪಾತ್ರ ಬಯಲಾಯಿತು. ವಿಚಾರಣೆಯಲ್ಲಿ ಆಕೆ ಎಲ್ಲವನ್ನೂ ಒಪ್ಪಿಕೊಂಡಿದ್ದಾಳೆ. ಸಹೋದರ ಮತ್ತು ಸ್ನೇಹಿತರ ಸಹಾಯದಿಂದ ಹತ್ಯೆ ಸಂಚು ರೂಪಿಸಿದ್ದಾಳೆ ಎಂಬುದು ದೃಢಪಟ್ಟಿದೆ.

ನಂಜನಗೂಡು ಪೊಲೀಸರ ವೇಗದ ತನಿಖೆ ಮತ್ತು ಕಾರ್ಯಕ್ಷಮತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related posts