ಸಿನೆಮಾ ಸುದ್ದಿ 

“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ

Taluknewsmedia.com

“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ

ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿ ಮೂವರು ಪಾತ್ರಗಳಲ್ಲಿ ಮಿಂಚಿರುವ ರವಿ ಗೌಡ ಅವರ “I Am God” ಸಿನಿಮಾ ಈಗ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ ಈ ಸಿನಿಮಾ, ಟ್ರೇಲರ್ ಬಿಡುಗಡೆಗೊಂಡ ನಂತರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಚಿತ್ರದ ಶೀರ್ಷಿಕೆ ಕೇಳುತ್ತಿದ್ದಂತೆಯೇ ಯಾರಿಗಾದರೂ ನೆನಪಾಗುವುದು ರಿಯಲ್‌ ಸ್ಟಾರ್ ಉಪೇಂದ್ರ. ಇದೇ ಉಪ್ಪಿ ಅವರ ಶಿಷ್ಯನಾದ ರವಿ ಗೌಡ, ಅವರ ಪಾಠದಿಂದ ಪ್ರೇರಿತನಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಪೇಂದ್ರ ಅವರ “ಉಪ್ಪಿ 2” ಸಿನಿಮಾದಲ್ಲಿ ಸಹಾಯಕನಾಗಿ ಕೆಲಸಮಾಡಿದ ನಂತರ, “ಸ್ವಂತ ಚಿತ್ರ ನಿರ್ದೇಶನ” ಎಂಬ ಕನಸನ್ನು ಸಾಕಾರಗೊಳಿಸಿರುವುದು ಈ ಸಿನಿಮಾ ಮೂಲಕ.

ಮೈಸೂರಿನಲ್ಲಿ ನಡೆದ ಟ್ರೇಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಕೈಯಿಂದಲೇ ಟ್ರೇಲರ್ ಬಿಡುಗಡೆಗೊಂಡಿತು. ತಮ್ಮ ಶಿಷ್ಯನ ಕೃತಿಯನ್ನು ನೋಡಿ ಉಪ್ಪಿ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಪ್ಪಿ 2 ಸಮಯದಲ್ಲಿ ರವಿ ಎಷ್ಟು ಕೌತುಕದಿಂದ, ಕಣ್ಣಲ್ಲಿ ಕನಸು ಇಟ್ಟುಕೊಂಡು ಸಿನಿಮಾ ಕಲಿತಿದ್ದರೋ, ಅದೇ ಉತ್ಸಾಹ ಇಂದು ಟ್ರೇಲರ್‌ನಲ್ಲಿ ಕಾಣುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅದೇ ವೇಳೆ ಮಾತನಾಡಿದ ರವಿ ಗೌಡ, ತಮ್ಮ ಗುರುಗಳನ್ನು ಮೊದಲು ಭೇಟಿಯಾದ ಅನುಭವ ಹಂಚಿಕೊಂಡು ಹೇಳಿದರು : “ಸಿನಿಮಾ ಕಲಿಯಲು ಯಾವುದೇ ಯೂನಿವರ್ಸಿಟಿ ಬೇಕಿಲ್ಲ, ಉಪ್ಪಿ ಸರ್ ಹತ್ತಿರ ಹೋಗೋದು ಸಾಕು ಅನ್ನಿಸಿದ್ದೆ. ಹೀಗೆ ಅವರ ಸಹಾಯದಿಂದ ನಾನು ‘I Am God’ ಮಾಡ್ತಿದ್ದೇನೆ.”

“ನಾವು ಕಷ್ಟಪಟ್ಟು ಚಿತ್ರ ಮಾಡಿದೇವೆ, ಬಂದು ನೋಡಿ ಅಂತ ಹೇಳಲ್ಲ. ನಿಮ್ಮ ಗುಂಪಿನಲ್ಲಿ ಪ್ರತೀ ಶುಕ್ರವಾರ ಕನ್ನಡ ಸಿನಿಮಾ ನೋಡೋ ಒಬ್ಬ ವ್ಯಕ್ತಿ ಇದ್ದರೆ, ಅವರಿಗೆ ಕೇಳಿ ‘I Am God ಹೇಗಿತ್ತು?’ ಅಂತ ಕೇಳಿ. ಅದೇ ನಮಗೆ ಸಂತೋಷ.”

ಟ್ರೇಲರ್ ನೋಡಿದರೆ ಇದು ಸಸ್ಪೆನ್ಸ್–ಥ್ರಿಲ್ಲರ್ ಲವ್ ಸ್ಟೋರಿ ಎನ್ನುವ ಹಿನ್ನುಡಿ ಸ್ಪಷ್ಟವಾಗುತ್ತದೆ. ರವಿ ಗೌಡನ ಚಿತ್ರದಲ್ಲಿಯೂ ಉಪೇಂದ್ರ ಶೈಲಿಯ ಚಿತ್ರಕಥೆ ವಿನ್ಯಾಸ, ದೃಶ್ಯ ಸಂಯೋಜನೆ ಮತ್ತು ತತ್ತ್ವದ ಅಂಚುಗಳು ಕಾಣಿಸುತ್ತವೆ.

ಚಿತ್ರದಲ್ಲಿ ನಾಯಕಿಯಾಗಿ ವಿಜೇತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ರವಿಶಂಕರ್, ಅವಿನಾಶ್, ಅರುಣ ಬಾಲರಾಜ್, ಮತ್ತು ನಿರಂಜನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಸಂಗೀತವನ್ನು ಅಜನೀಶ್ ಲೋಕನಾಥ್ ಸಂಯೋಜಿಸಿದ್ದು, ಛಾಯಾಗ್ರಹಣವನ್ನು ಜಿತಿನ್ ದಾಸ್ ನಿರ್ವಹಿಸಿದ್ದಾರೆ.

ನವೆಂಬರ್ 7 ರಂದು ರಾಜ್ಯಾದ್ಯಂತ “I Am God” ಚಿತ್ರ ತೆರೆಗೆ ಬರಲಿದೆ.

Related posts