ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು
ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು
ನಾಗಮಂಗಲ : ಪ್ರಪಂಚದಲ್ಲಿ ಎಲ್ಲಾದರು ಕನ್ನಡ ಕೇಳಿದರೆ ಅದು ನಾಗಮಂಗಲದ ಜನರ ಧ್ವನಿ. ಶುದ್ಧ ಕನ್ನಡ ನಾಗಮಂಗಲ ಜನರಿಂದ ಮಾತ್ರ ಸಾಧ್ಯ ಎಂದು ಮೈಸೂರು ಇಪ್ರೊ ಜಾನಪದ ಮಹಾ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ.ವ.ನಂ.ಶಿವರಾಮು ಅಭಿಪ್ರಾಯ ಪಟ್ಟರು.
ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ಭಾಷೆ ಒಂದು ಸಂಸ್ಕೃತಿ. ಕನ್ನಡತನದ ಸೊಗಡು ಸಮಾಜದಲ್ಲಿ ಆವರಿಸಿದ್ದಾಗ ಸಂಬಂಧಗಳಲ್ಲಿ ಗಟ್ಟಿತನ ಇತ್ತು. ಆಂಟಿ ಅಂಕಲ್ ಸಂಸ್ಕೃತಿ ಬಂದಮೇಲೆ ಕನ್ನಡ ಸೊರಗಿ ಅನೈತಿಕ ಸಂಬಂಧ ಅನಾಚಾರ ಅತ್ಯಾಚಾರ ಹೆಚ್ಚಾಗಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಮನಸ್ಸು ಮಾಡಿದರೆ ಮನೆ ಪೂರಾ ಕನ್ನಡವಾಗುತ್ತದೆ, ಕನ್ನಡ ಉಳಿಯುತ್ತದೆ. ಕನ್ನಡ ಭಾಷೆಗೆ ಗ್ರಾಮೀಣರ ಕೊಡುಗೆ ಅಪಾರ. ಕನ್ನಡ ಹಡೆದವ್ವ ಇದ್ದಂತೆ ಇಂಗ್ಲಿಷ್ ಅತ್ತೆ ಇದ್ದಂತೆ. ಇಂಗ್ಲೀಷ್ ನ ಅಪ್ಪಿಕೊಳ್ಳೋಕೆ ಆಗಲ್ಲ. ಕನ್ನಡವನ್ನು ಮಾತ್ರ ಅಪ್ಪಿಕೊಳ್ಳೋಕೆ ಸಾಧ್ಯ ಎಂದರು.
ತಹಸೀಲ್ದಾರ್ ಜಿ.ಆದರ್ಶ ೭೦ ನೇ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.
ರಾಜ್ಯೋತ್ಸವದ ಸನ್ಮಾನಿತರು : ಸಾಹಿತ್ಯ ಕ್ಷೇತ್ರದಲ್ಲಿ ಬೆಳ್ಳೂರು ಟೌನ್ ನ
ಬಿ.ಎನ್ ಪದ್ಮಪ್ರಸಾದ್, ಜಾನಪದ ಕ್ಷೇತ್ರದಲ್ಲಿ ದೊಡ್ಡಚಿಕ್ಕನಹಳ್ಳಿಯ ನರಸಿಂಹಮೂರ್ತಿ, ಕನ್ನಡ ಸಂಘಟನೆ
ಚಟ್ಟೇನಹಳ್ಳಿಯ ಸಿ.ಎನ್.ಅಶೋಕ್ ಕುಮಾರ್, ಮೂಡಲಪಾಯ ಯಕ್ಷಗಾನ ಕ್ಷೇತ್ರದಲ್ಲಿ ಕರಿಜೀರಹಳ್ಳಿಯ ಕೆ.ಕುಮಾರ,
ಶಿಲ್ಪಕಲೆ ನಾಗಮಂಗಲ ಪಟ್ಟಣದ ಎನ್.ಜಿ.ವಿಜಯಕುಮಾರ, ಶಿಕ್ಷಣ ಕ್ಷೇತ್ರದಲ್ಲಿ ಕೆ.ಮಲ್ಲೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಡಿ.ಬಿ ನರಸಿಂಹಮೂರ್ತಿ, ಜನಪದ ಸಂಗೀತ
ಕ್ಷೇತ್ರದಲ್ಲಿ ತೊಳಲಿಯ ಚೈತ್ರ ಶಿವನಾಗ್, ಸಾಂಸ್ಕೃತಿಕ ಕಲೆ ಅಳೀಸಂದ್ರದ ವಿಕಾಸ್, ಕೃಷಿ ಕ್ಷೇತ್ರದಲ್ಲಿ ಕೂಚಹಳ್ಳಿಯ
ಕೆ.ಎಲ್ ಮಂಜೇಗೌಡ, ರಂಗಭೂಮಿ ಕ್ಷೇತ್ರದಲ್ಲಿ ಕಾರಬೈಲು ಗ್ರಾಮದ ಹೊನ್ನಗಿರಿಗೌಡ ೭೦ ನೇ ತಾಲ್ಲೂಕು ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾದರು.
ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷಾ, ಉಪಾಧ್ಯಕ್ಷೆ ವಸಂತಲಕ್ಷ್ಮಿ ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್,
ಡಿವೈಎಸ್ಪಿ ಚೆಲುವರಾಜು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸಿ.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಕೌಶಿಕ್ ತಟ್ಟೇಕೆರೆ

