ಕಾಮಗಾರಿ ಬಿಲ್ಗಳ ಜಾರಿಯ ವಿಚಾರವಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆತ್ಮಹತ್ಯೆಗೆ ಯತ್ನಿಸಿದ ಗಂಭೀರ ಘಟನೆ..
ಕಾಮಗಾರಿ ಬಿಲ್ಗಳ ಜಾರಿಯ ವಿಚಾರವಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆತ್ಮಹತ್ಯೆಗೆ ಯತ್ನಿಸಿದ ಗಂಭೀರ ಘಟನೆ ದಾವಣಗೆರೆಯ ಜಗಳೂರು ತಾಲೂಕು ಪಂಚಾಯತ್ ಕಚೇರಿ ಸಮೀಪ ನಡೆದಿದೆ.
ಭರಮಸಮುದ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅವರು ಅಚಾನಕ್ ತಮ್ಮ ಮೇಲೆ ಪೆಟ್ರೋಲ್ ಸುರಿದು ಜೀವ ಕೊಡುವ ಪ್ರಯತ್ನ ಮಾಡಿದ್ದಾರೆ. ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ಗಳನ್ನು ಪಾವತಿಸದೇ ಅಧಿಕಾರಿಗಳು ತಿಪ್ಪೇಸ್ವಾಮಿಯನ್ನು ಆಗಾಗ ಚಕ್ರ ಹಾಕುತ್ತಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ PDO ಹಾಗೂ ಇತರೆ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಹೆಚ್ಚಿನ ಗಮನ ಕೊಡದೇ ನಿರ್ಲಕ್ಷ್ಯ ತೋರಿದ್ದರಿಂದ ಉಪಾಧ್ಯಕ್ಷರು ತೀವ್ರ ಬೇಸರಗೊಂಡಿದ್ದರು.
ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಮಾನಸಿಕ ಒತ್ತಡಕ್ಕೆ ಒಳಗಾದ ತಿಪ್ಪೇಸ್ವಾಮಿ ಅಂತಿಮವಾಗಿ ಆತ್ಮಹತ್ಯೆಗೆ ಮುಂದಾಗಿದ್ದು, ಸ್ಥಳೀಯರು ತಕ್ಷಣ ನೀರು ಹಾಕಿ ಅವರನ್ನು ಉಳಿಸಿದ್ದಾರೆ. ಈ ಘಟನೆಯ ನಂತರ PDO ಕೊಟ್ರೇಶ್ ಹಾಗೂ EO ವಿರುದ್ಧ ತಿಪ್ಪೇಸ್ವಾಮಿ ತಮ್ಮ ಆಕ್ರೋಶವನ್ನು ಸ್ಪಷ್ಟವಾಗಿ ಹೊರ ಹಾಕಿದ್ದಾರೆ.

