ಬೀಗಸ್ಥಾನ ಎನ್ನುವ ರಾಜಣ್ಣ ಹೇಳಿಕೆಗೆ ಡಿಕೆಶಿಯ ತಿರುಗೇಟು
ಬೀಗಸ್ಥಾನ ಎನ್ನುವ ರಾಜಣ್ಣ ಹೇಳಿಕೆಗೆ ಡಿಕೆಶಿಯ ತಿರುಗೇಟು
ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಸಚಿವ ರಾಜಣ್ಣ ಅವರು ಮಾಡಿದ್ದ “ಬೀಗಸ್ಥಾನ” ಎಂಬ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ಅವರು ಅಲ್ಲಿ ಹೋಗೋದು, ಇವರು ಇಲ್ಲಿ ಬರೋದು, ಊಟ ಮಾಡ್ಕೊಂಡು ಬರೋದು… ಈ ತರಹಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್ ಬೀಗಸ್ಥಾನದ ಮೀಟಿಂಗ್ ಅನ್ನೋ ತರ ಹೇಳಿರುವುದು ಸರಿಯಲ್ಲ. ನಾನು ರಾಜಣ್ಣ ಅವರ ಮನೆಗೆ ಹೋದದ್ದು ಅವರು ನನ್ನನ್ನು ತಮ್ಮ ಬರ್ತಡೇಗೆ ಕರಿದ್ರು, ಅದು ನಮ್ಮ ಸಾಮಾನ್ಯ ಆತ್ಮೀಯತೆ. ಇಲ್ಲಿ ಬೀಗಸ್ಥಾನ ಎಲ್ಲಿ ಬರುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ಶಿವಕುಮಾರ್ ಮುಂದುವರಿಸಿ, “ಎರಡೂ ಕಡೆ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ನಡೆದಿವೆ. ಯಾರಿಗೂ ಯಾವುದೇ ಗೊಂದಲ ಇರಲಿಲ್ಲ. ಗೊಂದಲ ಮಾಡ್ತಾ ಇದ್ದವರು ನೀವು (ಮಾಧ್ಯಮ). ಈಗ ಎಲ್ಲವೂ ಸ್ಪಷ್ಟವಾಗಿದೆ,” ಎಂದಿದ್ದಾರೆ.
ಕ್ಯಾಬಿನೆಟ್ ರೀಶಫಲ್ ಬಗ್ಗೆ ಪ್ರತಿಕ್ರಿಯೆ…
ಕ್ಯಾಬಿನೆಟ್ ರೀಶಫಲ್ ನಡೆಯಬಹುದೇ ಎಂಬ ಪ್ರಶ್ನೆಗೆ ಡಿಕೆಶಿ, “ಬಹಳ ಜನಗಳ ಹೆಸರುಗಳು ಬರುತ್ತಿವೆ. ನನಗೆ ಗೊತ್ತಿಲ್ಲ. ಇವತ್ತಿಗೇನೂ ಅಂತಿಮ ನಿರ್ಧಾರ ಇಲ್ಲ,” ಎಂದು ಹೇಳಿದ್ದಾರೆ. ಮುಂದೆ ಮುಖ್ಯಮಂತ್ರಿ ಜೊತೆ ಮರುಭೇಟಿ ಬಗ್ಗೆ ಕೇಳಿದಾಗ, “ಅವರು ಅಸೆಂಬ್ಲಿ–ಪಾರ್ಲಿಮೆಂಟ್ ಕೆಲಸದಲ್ಲಿ ತುಂಬಾ ಬಿಸಿ ಇದ್ದಾರೆ. ಗಲಾಟೆಗಳ ನಡುವೆ ಸಮಯ ಸಿಗೋದಿಲ್ಲ. ಅವಕಾಶ ಬಂದಾಗ ಮಾತಾಡ್ತೀವಿ,” ಎಂದು ಹೇಳಿದ್ದಾರೆ.
ಸರ್ವಪಕ್ಷ ಸಭೆ, ಸೆಂಟ್ರಲ್ ಮಂತ್ರಿಗಳು ಮತ್ತು ಮುಂದಿನ ಕಾರ್ಯಕ್ರಮ…
ಸರ್ವಪಕ್ಷ ಸಭೆ ಕ್ಯಾನ್ಸಲ್ ಆಗಿದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದ್ದು ಹೀಗೆ: “ಸರ್ವಪಕ್ಷ ಸಭೆ ಕ್ಯಾನ್ಸಲ್ ಆಗಿಲ್ಲ. ಕೆಲವು ಸೆಂಟ್ರಲ್ ಮಂತ್ರಿಗಳಿಗೂ ಅನುಕೂಲವಾದ ಸಮಯ ಬೇಕಾಗಿತ್ತು. ಅವರ ಜೊತೆ ಡಿಸ್ಕಸ್ ಮಾಡಬೇಕಿದೆ. ಅಪೋಸಿಷನ್ ಲೀಡರ್ಸ್ ಕೂಡ ಬರಬೇಕು. ಇದನ್ನು ತುರ್ತು ಮೀಟಿಂಗ್‌ನಂತೆ ಮಾಡೋಕೆ ಆಗಲ್ಲ. ಆದ್ದರಿಂದ ನಾವು 8ನೇ ತಾರೀಕು ಫಿಕ್ಸ್ ಮಾಡಿದ್ದೇವೆ. ಅದರ ಪ್ರಿಪರೇಶನ್ ಕೂಡ ನಡೆಯುತ್ತಿದೆ.”
ಪ್ರಧಾನಮಂತ್ರಿಯವರ ಜೊತೆಗಿನ ಸಮಯದ ಬಗ್ಗೆ ಅವರು ಹೇಳಿದ್ದು: “ಸಿಎಂ ಎಲ್ಲರಿಗೂ ಸಮಯ ಕೇಳಿದ್ದಾರೆ. ಪಾರ್ಲಿಮೆಂಟ್‌ನ ಪರಿಸ್ಥಿತಿಯನ್ನೂ ಗಮನದಲ್ಲಿಡಬೇಕು. ರಾಜ್ಯದ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಒಂದು ಧ್ವನಿಯಾಗಿ ಕೆಲಸ ಮಾಡಬೇಕಿದೆ,” ಎಂದಿದ್ದಾರೆ.
ಕಾವೇರಿ ವಿಚಾರ – ಸಿಡಬ್ಲ್ಯುಎಂಎ ಸಭೆ
ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಸಿಡಬ್ಲ್ಯುಎಂಎ ಸಭೆ ಬಗ್ಗೆ ಮಾತನಾಡಿದ ಡಿಕೆಶಿ, “8ನೇ ತಾರೀಕು ಸಿಡಬ್ಲ್ಯುಎಂಎ ಸಭೆ ಇದೆ. ಕಾವೇರಿ ವಿಷಯ ಅಜೆಂಡಾದಲ್ಲಿಲ್ಲ, ಮೇಕೆದಾಟವೂ ಇಲ್ಲ. ಆದ್ದರಿಂದ ನಾವು ನಮ್ಮ ಪ್ರೆಸೆಂಟೇಶನ್‌ನ್ನು ರೆಡಿ ಮಾಡ್ತಿದ್ದೇವೆ. ಇಲಾಖೆಗಳು ಎಲ್ಲ ದಾಖಲೆಗಳನ್ನು ಸಿದ್ಧಪಡಿಸುತ್ತಿವೆ. ಇದು 6 ತಿಂಗಳೊಳಗೆ ಪೂರ್ಣಗೊಳ್ಳಬೇಕಾದ ಪ್ರಕ್ರಿಯೆ. ಎಲ್ಲರಿಗೂ ಕಾಪಿಗಳು ಕೊಡ್ತೀವಿ,” ಎಂದು ವಿವರಿಸಿದರು.

