ಸುದ್ದಿ 

ಡಿಕೆ ಶಿವಕುಮಾರ್‌—ವಾಚ್ ವಿವಾದಕ್ಕೆ ಗಟ್ಟಿಯಾದ ಪ್ರತಿಕ್ರಿಯೆ: “ನನ್ನ ದುಡ್ಡು, ನನ್ನ ಆಯ್ಕೆ”

Taluknewsmedia.com

ಡಿಕೆ ಶಿವಕುಮಾರ್‌—ವಾಚ್ ವಿವಾದಕ್ಕೆ ಗಟ್ಟಿಯಾದ ಪ್ರತಿಕ್ರಿಯೆ: “ನನ್ನ ದುಡ್ಡು, ನನ್ನ ಆಯ್ಕೆ”

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮ್ಮ ವೈಯಕ್ತಿಕ ಜೀವನಶೈಲಿ, ವಿಶೇಷವಾಗಿ ಅವರು ಧರಿಸುವ ವಾಚ್ ಕುರಿತು ವಿರೋಧ ಪಕ್ಷದ ನಾಯಕರು ಮಾಡಿರುವ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, “ನಾನು ನನ್ನ ಶ್ರಮದಿಂದ ಸಂಪಾದಿಸಿದ ಹಣದಲ್ಲಿ ಯಾವ ವಾಚ್ ಬೇಕಾದರೂ ತೊಡುತ್ತೇನೆ. ಸಾವಿರ ರೂಪಾಯಿಯನ್ನೂ ಹಾಕುತ್ತೇನೆ, ಹತ್ತು ಲಕ್ಷದ ವಾಚನ್ನೂ ಹಾಕುತ್ತೇನೆ—ಅದು ಸಂಪೂರ್ಣ ನನ್ನ ವಿಷಯ” ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ನಾಯಕರು ತಮ್ಮ ಬಗ್ಗೆ ಟೀಕೆ ಮಾಡಿರುವುದಕ್ಕೆ ಕಾರಣ, ಅವರಿಗೆ ಸಾರ್ವಜನಿಕ ಜೀವನದ, ವಿಶೇಷವಾಗಿ ಚುನಾವಣಾ ರಾಜಕೀಯದ ಅನುಭವ ಕಡಿಮೆಯಿದೆ ಎಂದು ಡಿಕೆಶಿ ಚಾಟಿ ಹಾಯಿಸಿದರು. “ಅವರಿಗೆ ಅನುಭವದ ಕೊರತೆ. ಏನು ಮಾತನಾಡಬೇಕು ಎಂಬುದೇ ಗೊತ್ತಿಲ್ಲ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಮಾತ್ರ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರು ಇದ್ದರೆ ನಾನು ಉತ್ತರಕೊಡಬೇಕಾಗಿರಲಿಲ್ಲ” ಎಂದರು.

“ಯಾರು ಯಾವ ಶೂ ಹಾಕ್ತಾರೆ, ಯಾವ ವಾಚ್ ಹಾಕ್ತಾರೆ—ಇದು ವೈಯಕ್ತಿಕ”….

ತಮ್ಮ ಫ್ಯಾಷನ್‌ ಆಯ್ಕೆಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರುವುದನ್ನು ಟೀಕಿಸಿದ ಡಿಕೆಶಿ,
“ಇದು ಒಬ್ಬೊಬ್ಬರ ರುಚಿ. ಕೆಲವರು ಸಾವಿರ ರೂಪಾಯಿಯ ಶೂ ಹಾಕ್ತಾರೆ, ಕೆಲವರು ಲಕ್ಷಕ್ಕೆ ಶೂ ಹಾಕ್ತಾರೆ. ನಾನು ಯಾರನ್ನೂ ಪ್ರಶ್ನೆ ಮಾಡಲ್ಲ. ಅದೇ ರೀತಿ ನನ್ನ ವ್ಯಯವನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ” ಎಂದು ಹೇಳಿದರು. ತಮ್ಮ ವೃತ್ತಿಜೀವನ, ವ್ಯವಹಾರ ಹಾಗೂ ಸಂಪಾದನೆ ಬಗ್ಗೆ ಬಿಜೆಪಿ ನಾಯಕರಿಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಸವಾಲು ಹಾಕಿದರು.

ಗುರಿ ಸಾಧನೆ ಕುರಿತು: “ಜನಪರ ಕೆಲಸ ಮಾಡಿದಾಗಲೇ ಗುರಿ ಮುಟ್ಟುತ್ತೇವೆ”….

ಮುಂದಿನ ದಿನಗಳಲ್ಲಿ ಹೊಸ ಕಾರ್ಯಕ್ರಮಗಳು, ಹೊಸ ಗುರಿಗಳಿಗೆ ಸರ್ಕಾರ ಪ್ರಯತ್ನಿಸಲಿದೆ ಎಂದು ಡಿಕೆಶಿ ಸೂಚಿಸಿದರು. “ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ 1.11 ಲಕ್ಷ ಕೋಟಿ ರೂ. ಸೇರಿದೆ. ಜನರ ಬದುಕಿನಲ್ಲಿ ಬದಲಾವಣೆ ತಂದಾಗಲೇ ನಮ್ಮ ಗುರಿ ಸಾಧಿತವಾದಂತಾಗುತ್ತದೆ” ಎಂದು ಹೇಳಿದರು.

ಇಡಿ ಸಮನ್ಸ್ ಕುರಿತಾಗಿ: “ಕಿರುಕುಳ ನೀಡುವ ಉದ್ದೇಶ ಸ್ಪಷ್ಟ”….

ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿರುವ ಪ್ರಕರಣದಲ್ಲಿ ಇಡಿ ನೀಡಿದ ಸಮನ್ಸ್‌ ಬಗ್ಗೆ ಮಾತನಾಡಿದ ಡಿಕೆಶಿ, ಇದು ರಾಜಕೀಯ ಕಿರುಕುಳವಷ್ಟೇ ಎಂದು ಅವರು ಆರೋಪಿಸಿದರು. “ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸಿದ್ದೇವೆ. ಯಾವುದನ್ನೂ ಮರೆಮಾಚಿರುವುದಿಲ್ಲ. ಆದರೂ ಸಮನ್ಸ್ ಕೊಟ್ಟಿರುವುದು ಆಶ್ಚರ್ಯಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡೆ.19ರೊಳಗೆ ದೆಹಲಿ ಪೊಲೀಸರಿಗೆ ವಿವರ ನೀಡುವಂತೆ ಸೂಚನೆ ಬಂದಿದೆ ಎಂದೂ ತಿಳಿಸಿದ್ದಾರೆ.

“ನಾವು ತೆರಿಗೆ ಪಾವತಿಸುತ್ತೇವೆ, ನಮ್ಮ ಹಣವನ್ನು ನಾವು ತೀರ್ಮಾನಿಸಿದ ಕಡೆಗೆ ಕೊಡುತ್ತೇವೆ. ಇದನ್ನು ರಾಜಕೀಯವಾಗಿ ಉಪಯೋಗಿಸಿ ಗೊಂದಲ ಸೃಷ್ಟಿಸುವುದು ಸರಿಯಲ್ಲ” ಎಂದು ಡಿಕೆಶಿ ಕಟುವಾಗಿ ಟೀಕಿಸಿದರು.

“ಸೋನಿಯಾ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ”…

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸುತ್ತಿರುವ ಪ್ರಯತ್ನ ನಡೆಯುತ್ತಿದೆ ಎಂದು ಡಿಕೆಶಿ ಆರೋಪಿಸಿದರು.
“ಈ ಸಂಸ್ಥೆಗಳು ಕಾಂಗ್ರೆಸ್ ಟ್ರಸ್ಟ್‌ಗಳ ಭಾಗ. ಕಷ್ಟ ಕಾಲದಲ್ಲಿ ನಾವು ದೇಣಿಗೆ ನೀಡಿದ್ದೇವೆ. ನಮ್ಮಂತೆ ಹಲವರು ಸಹ ಮಾಡಿದ್ದರು. ಇದಕ್ಕೆ ನೋಟಿಸ್ ನೀಡುವುದು ರಾಜಕೀಯ ಒತ್ತಡವೇ” ಎಂದರು.

Related posts