ಸುದ್ದಿ 

ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 11 ಹಸುವಿನ ಕರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳು ಬಂಧನ

Taluknewsmedia.com

ದೇವಲಾಪುರ ಹೋಬಳಿಯ ಕುಂಟಾನಕೊಪ್ಪಲು ಗ್ರಾಮ ಗೇಟ್ ಬಳಿ ಸಂಭವಿಸಿದ ಕಾರು ಅಪಘಾತದಿಂದ ಹಸುವಿನ ಕರುಗಳ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಾಗಮಂಗಲ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು (ನಂ. ಕೆಎ 01 ಎಂಡಿ 9542) ನಿಗದಿತ ವೇಗ ಮೀರಿ ಅಜಾಗರೂಕತೆಯಿಂದ ಚಾಲನೆ ಮಾಡಲಾಗಿದ್ದು, ಕುಂಟಾನಕೊಪ್ಪಲು ಗೇಟ್ ಬಳಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಘಟನೆ ಕುರಿತು ಮಾಹಿತಿ ಪಡೆದ ನಾಗಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಜೆ ಅವರು ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಕಾರಿನೊಳಗೆ ಸುಮಾರು ಒಂದು ತಿಂಗಳೊಳಗಿನ 11 ಹಸುವಿನ ಕರುಗಳನ್ನು ಪತ್ತೆಹಚ್ಚಲಾಯಿತು. ಈ ಕರುಗಳ ಬಾಯಿ ಮತ್ತು ಕಾಲುಗಳನ್ನು ದಾರಯಿಂದ ಕಟ್ಟಲಾಗಿದ್ದು, ಅವುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು.

ಪೊಲೀಸರು ಸ್ಥಳದಲ್ಲಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿತರನ್ನು ಹೀಗೆ ಗುರುತಿಸಲಾಗಿದೆ:

  1. ಸೈಯದ್ ಅಯನ್ (22 ವರ್ಷ) – ಕಾರು ಚಾಲಕ, ಹುಲಿಯೂರುದುರ್ಗ
  2. ಮೊಹಮ್ಮದ್ ಫಾರ್ದಿನ್ ಪಾಷ (20 ವರ್ಷ) – ಪಂಚರ್ ಅಂಗಡಿಯಲ್ಲಿ ಕೆಲಸ, ಹುಲಿಯೂರುದುರ್ಗ

ಚಾಲಕನ ಹೇಳಿಕೆಯಂತೆ, ಅವರು ಚನ್ನರಾಯಪಟ್ಟಣದ ವಿವಿಧ ರೈತರಿಂದ ಕರುಗಳನ್ನು ಖರೀದಿ ಮಾಡಿ, ಹುಲಿಯೂರುದುರ್ಗದ ಏಜಾಸ್ ಪಾಷ ಎಂಬುವರ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು. ಅವರ ಬಳಿ ಯಾವುದೇ ಮರಿ ಸಾಗಾಣಿಕೆ ಪರವಾನಿಗೆ ಅಥವಾ ವೈದ್ಯರ ಪ್ರಮಾಣಪತ್ರವೂ ಇರಲಿಲ್ಲ.

ಪೊಲೀಸರು ಪ್ರಕರಣವನ್ನು BNS-2023 ಸೆಕ್ಷನ್ 281, ಕರ್ನಾಟಕ ಹಸು ವಧೆ ತಡೆ ಮತ್ತು ಹಸುಗಳ ರಕ್ಷಣಾ ಕಾಯ್ದೆ 2020 (ಸೆಕ್ಷನ್ 4, 5, 7, 12) ಹಾಗೂ ಪ್ರಾಣಿ ಕ್ರೂರತೆ ತಡೆಯುವ ಕಾಯ್ದೆ 1960 (ಸೆಕ್ಷನ್ 11(1)(a)(d)) ಅಡಿಯಲ್ಲಿ ದಾಖಲಿಸಿದ್ದು, ಕಾರು, ಕರುಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ತನಿಖೆ ಮುಂದುವರಿದಿದೆ.

ವರದಿ :

ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್

Related posts