‘ದಿಗ್ಲುಪುರ’ ಚಿತ್ರಕ್ಕೆ ಮುಹೂರ್ತ – ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಂದ ಕ್ಲಾಪ್!
‘ದಿಗ್ಲುಪುರ’ ಚಿತ್ರಕ್ಕೆ ಮುಹೂರ್ತ – ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಂದ ಕ್ಲಾಪ್!
ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಮ್ಯಾಜಿಕ್ ಅಥವಾ ಮಾಟಮಂತ್ರ ಆಧಾರಿತ ಸಿನಿಮಾಗಳು ಅಪರೂಪ. ಹಿಂದಿನ ದಶಕಗಳಲ್ಲಿ ಏಟು ಎದಿರೇಟು, ಇತ್ತೀಚಿನ ಕಟಕ ಮುಂತಾದ ಚಿತ್ರಗಳು ಆ ಶೈಲಿಯ ಯಶಸ್ವಿ ಪ್ರಯೋಗಗಳಾಗಿದ್ದವು. ಈಗ ಆ ದಾರಿಗೆ ಹೊಸ ಹಾದಿ ತೆರೆದು ದಿಗ್ಲುಪುರ ಎಂಬ ಹೊಸ ಚಿತ್ರ ರೂಪುಗೊಳ್ಳುತ್ತಿದೆ. ಕಳೆದ ಶುಕ್ರವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಮೊದಲ ಕ್ಲಾಪ್ ನೀಡಿದರು.
“ದಿ ಡೆಡ್ ವಾಕ್ ಇನ್ ಸ್ಕೇರಿ ವಿಲೇಜ್” ಎಂಬ ಅಡಿಬರಹ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನ – ಎಲ್ಲವೂ ಮನೋಜ್ಞ ಮನ್ವಂತರ ಅವರದೇ. ರೇರ್ ವಿಜನ್ ಮೂವೀ ಮೇಕರ್ಸ್ ಸಂಸ್ಥೆಯಡಿ ಆರ್.ವಿ.ಎಂ.ಎಂ. ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮುಖ್ಯ ಪಾತ್ರಗಳಲ್ಲಿ ರಮೇಶ್ ಪಂಡಿತ್, ಲಯ ಕೋಕಿಲ, ಹಾಗೂ ಫರ್ದಿನ್ ಅಹ್ಮದ್ ನಟಿಸುತ್ತಿದ್ದಾರೆ.
ನಿರ್ದೇಶಕ ಮನೋಜ್ಞ ಮನ್ವಂತರ ಅವರು ಮಾತನಾಡುತ್ತಾ, “ಒಳ್ಳೆಯ ಕಥೆ, ವಿಭಿನ್ನ ವಿಷಯ ಇರೋ ಸಿನಿಮಾಗೆ ಪ್ರೇಕ್ಷಕರ ಬೆಂಬಲ ಖಂಡಿತ ಬರುತ್ತದೆ. ದಿಗ್ಲುಪುರ ಒಂದು ಕಲ್ಟ್ ಹಾರರ್ ಸಿನಿಮಾ. ಇಲ್ಲಿ ನಾವು ಮೊದಲ ಬಾರಿಗೆ ಜೆಂಪ್ ಸ್ಕೇರ್ ಕಾನ್ಸೆಪ್ಟ್‌ನ್ನು ಬಳಸುತ್ತಿದ್ದೇವೆ. ಭಯ ಅಂದರೆ ಏನು? ಮನುಷ್ಯ ಸತ್ತರೂ ಆತನ ಆಲೋಚನೆಗಳು ಜೀವಂತವಾಗಿರಬಹುದೇ? – ಈ ತತ್ತ್ವದ ಸುತ್ತ ಸಿನಿಮಾ ನಡೆಯಲಿದೆ,” ಎಂದರು.
ಕಥೆಯ ಹಿನ್ನೆಲೆ 1980ರ ದಶಕದ “ದಿಗ್ಲುಪುರ” ಎಂಬ ಕಾಲ್ಪನಿಕ ಹಳ್ಳಿ. ಅಲ್ಲಿನ ಬ್ಲಾಕ್ ಮ್ಯಾಜಿಷಿಯನ್‌ಗಳು ತಮ್ಮ ಮಂತ್ರಶಕ್ತಿಯಿಂದ ವಿರೋಧಿಗಳನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಆ ಹಳ್ಳಿಗೆ ಹೋಗುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಹೋದವರು ನಿಗೂಢವಾಗಿ ಸಾವನ್ನಪ್ಪುತ್ತಿದ್ದರು. ಆದರೂ ಐವರು ಧೈರ್ಯಶಾಲಿಗಳು ಆ ರಹಸ್ಯವನ್ನು ಬಯಲಿಗೆಳೆಯಲು ಅಲ್ಲಿ ಹೋಗುತ್ತಾರೆ. ಆದರೆ ಅವರು ಹಿಂದಿರುಗಿದ ನಂತರ ಅವರಿಗೂ ವಿಚಿತ್ರ ಸಾವಿನ ಅನುಭವವಾಗುತ್ತದೆ. ಇದರ ಹಿಂದಿರುವ ಭಯಾನಕ ರಹಸ್ಯವೇ ಚಿತ್ರದ ಹೂರಣ.
ಚಿತ್ರದ ಚಿತ್ರೀಕರಣ ನಾಲ್ಕು ಹಂತಗಳಲ್ಲಿ ರಾಮನಗರ, ಚನ್ನಪಟ್ಟಣ, ತೈಲೂರು, ಮುತ್ತತ್ತಿ ಮತ್ತು ತಲಕಾಡು ಸುತ್ತಮುತ್ತ ನಡೆಯಲಿದೆ. ಛಾಯಾಗ್ರಹಣ ಪ್ರಸಾದ್ ನಾಯಕ್, ಸಂಕಲನ ವೆಂಕಿ ಯುವಿಡಿ, ಸಂಗೀತ ಯುವ್ ವಿನಯ್, ಕಲಾ ನಿರ್ದೇಶನ ರಾಜು ಕೋಸ್ಟ್ಯೂಮ್ ಡಿಸೈನರ್ ಅವರಿಂದ ನಡೆಯಲಿದೆ.
ಹಿರಿಯ ನಟ ರಮೇಶ್ ಪಂಡಿತ್ ಮತ್ತು ಲಯ ಕೋಕಿಲ ಅವರು ಹಳ್ಳಿಯ ಇಬ್ಬರು ಪ್ರಬಲ ಮಾಟಗಾತಿಗಳ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತರ ಪ್ರಮುಖ ಪಾತ್ರಗಳಲ್ಲಿ ಸುಹಾಸ್, ಪ್ರಮೋದ್, ಲತಾ ನಾಗರಾಜ್, ಮಹೇಶ್, ಮತ್ತು ಯಶವಂತ್ ನಟಿಸುತ್ತಿದ್ದಾರೆ.
ಭಯ, ರಹಸ್ಯ ಮತ್ತು ಮಾನವ ಮನಸ್ಸಿನ ಗಾಢ ಅಂಶಗಳನ್ನು ಅನಾವರಣಗೊಳಿಸುವ ದಿಗ್ಲುಪುರ, ಕನ್ನಡ ಚಿತ್ರರಂಗಕ್ಕೆ ಹೊಸ ಶೈಲಿಯ ಹಾರರ್ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.

