ರಾಜಕೀಯ ಸುದ್ದಿ 

ನಾನ್‌ವೆಜ್‌ ಬ್ರೇಕ್‌ಫಾಸ್ಟ್‌ಗೆ ಬಿಜೆಪಿ ಕೆಂಡಾಮಂಡಲ.

Taluknewsmedia.com

ನಾನ್‌ವೆಜ್‌ ಬ್ರೇಕ್‌ಫಾಸ್ಟ್‌ಗೆ ಬಿಜೆಪಿ ಕೆಂಡಾಮಂಡಲ.

ರಾಜ್ಯ ರಾಜಕೀಯದಲ್ಲಿ ಇಂದು ‘ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್’ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದು, ಇದರ ವಿರುದ್ಧ ಬಿಜೆಪಿ ಈಗಾಗಲೇ ತೀವ್ರ ಕಿಡಿಕಾರಿದೆ. ಜೆಡಿಎಸ್ ಕೂಡ ತನ್ನದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದೆ.

ಬೆಳಗ್ಗೆಯೇ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ನಡೆದ ಈ ಸಭೆಗೆ ಸಂಬಂಧಿಸಿ ಸಿಎಂ ನೀಡಿದ ಕೆಲವು ಹೇಳಿಕೆಗಳು ದೊಡ್ಡ ಚರ್ಚೆಗೆ ಗ್ರಾಸವಾಗಿವೆ. “ನಾನೇ ಐದು ವರ್ಷ ಸಿಎಂ” ಎಂದು ಇತ್ತೀಚೆಗೆ ದೃಢವಾಗಿ ಹೇಳಿದ್ದ ಸಿದ್ದರಾಮಯ್ಯ, ಇಂದು “ರಾಜಕೀಯ ಯಾರಿಗೂ ಶಾಶ್ವತವಲ್ಲ” ಎಂದು ಬೇಳೂರು ಗೋಪಾಲಕೃಷ್ಣರ ಜೊತೆ ಮಾತನಾಡಿದ್ದರಿಂದ ರಾಜಕೀಯ ವೈರಾಗ್ಯದ ಮಾತು ಆಡಿದರೇ? ಎಂಬ ಅನುಮಾನ ಹುಟ್ಟಿದೆ.

ಈ ಕುರಿತು ಸ್ಪಷ್ಟನೆ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ, “ಸಿದ್ದರಾಮಯ್ಯ ಯಾವ ವೈರಾಗ್ಯದ ಮಾತನ್ನೂ ಆಡಿಲ್ಲ. ಅವರು ತುಂಬಾ ಖುಷಿಯಾಗಿದ್ದರು. ಇವೆಲ್ಲಾ ರಾಜಕೀಯದಲ್ಲಿ ಸಹಜ” ಎಂದು ಹೇಳಿದ್ದಾರೆ.

ಬಿಜೆಪಿ–ಜೆಡಿಎಸ್ ಕಿಡಿಕಾರಿಕೆ…

ಈ ನಡುವೆ ಪ್ರತಿಪಕ್ಷಗಳು ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್ ವಿರುದ್ಧ ತೀವ್ರ ಟೀಕೆ ನಡೆಸಿವೆ. ವಿಪಕ್ಷ ನಾಯಕ ಆರ್. ಅಶೋಕ್, ಸಿದ್ಧರಾಮಯ್ಯ ಹನುಮ ಜಯಂತಿಯ ದಿನವೇ ನಾಟಿ ಕೋಳಿ ಸೇವಿಸಿದ್ದಕ್ಕೆ ಕಿಡಿಕಾರಿದ್ದಾರೆ.
ಅವರು ಹೇಳಿದ್ದಾರೆ:

“ಯಾವ ಜಯಂತಿಯಾದರೂ ಸಿದ್ದರಾಮಯ್ಯರಿಗೆ ನಾನ್‌ವೆಜ್ ಬೇಕೇ ಬೇಕು. ಹನುಮ ಜಯಂತಿಯ ದಿನ ನಾಟಿ ಕೋಳಿ ಮರ್ಡರ್ ಮಾಡ್ತಿದ್ದಾರೆ. ಕಾಂಗ್ರೆಸ್ ಬಿಗ್ ಬಾಸ್‌ನಲ್ಲಿ ಜಗಳ ನಡೆಯುವ ಹಾಗೆಯೇ ಸರ್ಕಾರದಲ್ಲೂ ಗಲಾಟೆ ನಡೆಯುತ್ತಿದೆ” ಎಂದು.

ವಿಧಾನ ಪರಿಷತ್‌ನ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕೂಡಾ ಸರ್ಕಾರದ ವಿರುದ್ಧ ಟೀಕೆ ಮಾಡಿ, “ತಿಂಡಿಗಿಂತ ಗುಂಡಿಗೆ ಮಹತ್ವ ನೀಡಿ. ಬ್ರೇಕ್‌ಫಾಸ್ಟ್ ಹೆಸರಿನಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಅವರು ರಾಜ್ಯದಲ್ಲಿ 11 ತಿಂಗಳಲ್ಲಿ ಗುಂಡಿ ಸಮಸ್ಯೆಯಿಂದ 580 ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದರೆಂದು ಟೀಕಿಸಿದ್ದಾರೆ.

“ನಾಟಿ ಕೋಳಿ ಸರ್ಕಾರ” – ಪ್ರತಿಪಕ್ಷಗಳ ಮತ್ತೊಂದು ಹಾಸ್ಯಪ್ರಹಸನ… ಬಿಜೆಪಿ ಎಂಎಲ್ಸಿ ರವಿಕುಮಾರ್ ಪ್ರಶ್ನಿಸಿದ್ದಾರೆ:

“ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಾಟಿ ಕೋಳಿಯಲ್ಲಿದೆಯೇ? ಹಾಗಿದ್ದರೆ ಎಲ್ಲರಿಗೂ ನಾಟಿ ಕೋಳಿ ಕೊಟ್ಟು ಬಿಡಿ!”

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡಾ ಹಾಸ್ಯಭರಿತ ಟೀಕೆಯ ಮೂಲಕ ಸಿಎಂ–ಡಿಸಿಎಂ ಜಗಳವನ್ನು ಚುಟುಕಾಗಿ ಎತ್ತಿಹಿಡಿದು, “ಬ್ರೇಕ್‌ಫಾಸ್ಟ್ ಮಾಡ್ತೀರೋ, ಲಂಚ್ ಮಾಡ್ತೀರೋ, ಡಿನ್ನರ್ ಮಾಡ್ತೀರೋ… ಏನಾದ್ರೂ ಒಂದು ಬೇಗ ಇತ್ಯರ್ಥ ಮಾಡಿಕೊಂಡು ಮೂವ್ ಆನ್ ಆಯ್ತು!” ಎಂದು ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ಮತ್ತಷ್ಟು ಕೊರಳೇರಿಸಿ,
“ಕುರ್ಚಿ ಆಚೆಗೆ ಡಮ್ಮಿ ಸಿಎಂ ಸಿದ್ದರಾಮಯ್ಯರಿಂದ ಡಿಕೆ ಜೊತೆ ಸೆಟಲ್‌ಮೆಂಟ್ ನಡೆಯುತ್ತಿದೆ” ಎಂದು ವ್ಯಂಗ್ಯವಾಡಿದೆ.

ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಒಗ್ಗಟ್ಟಿನ ಪ್ರದರ್ಶನವೆಂದು ಕಾಂಗ್ರೆಸ್ ಹೇಳುತ್ತಿದ್ದರೂ, ಪ್ರತಿಪಕ್ಷಗಳು ಅದನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡು ಸರ್ಕಾರದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ. ಒಂದು ಸರಳ ಉಪಹಾರ ಸಭೆಯೇ ಈಗ ರಾಜ್ಯ ರಾಜಕೀಯದ ಕೇಂದ್ರ ಚರ್ಚೆಯಾಗಿ ಮಾರ್ಪಟ್ಟಿದ್ದು, ನಾನ್‌ವೆಜ್ ಬ್ರೇಕ್‌ಫಾಸ್ಟ್ ವಿಚಾರ ರಾಜ್ಯ ರಾಜಕೀಯದಲ್ಲಿ ಬೆಂಕಿಗೆ ತೈಲ ಸುರಿಯುವಂತೆ ಮಾಡಿದೆ.

Related posts