ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವೇಗ: 300 ಹಾಸಿಗೆಗಳ ಆಸ್ಪತ್ರೆ ಯೋಜನೆ ವೈದ್ಯಕೀಯ ಶಿಕ್ಷಣ..
ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವೇಗ: 300 ಹಾಸಿಗೆಗಳ ಆಸ್ಪತ್ರೆ ಯೋಜನೆ ವೈದ್ಯಕೀಯ ಶಿಕ್ಷಣ..
ಪುತ್ತೂರು: ನಗರದ ಬಹುನಿರೀಕ್ಷಿತ ಸರ್ಕಾರಿ ಮೆಡಿಕಲ್ ಕಾಲೇಜು ಯೋಜನೆ ಹೊಸ ಹಂತಕ್ಕೆ ಕಾಲಿಟ್ಟಿದೆ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಗತ್ಯವಿರುವ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದ ಕಡತವನ್ನು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಶಾಸಕರಾದ ಅಶೋಕ್ ರೈ ಅವರ ನಿರಂತರ ಒತ್ತಡದಿಂದ ಈ ಪ್ರಮುಖ ಪ್ರಕ್ರಿಯೆಗೆ ಚುರುಕು ಬಂದಿದೆ.
ಪುತ್ತೂರು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ 300 ಹಾಸಿಗೆಗಳ ಆಸ್ಪತ್ರೆ ಕಡತ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ. ಈಗಿನ 5.16 ಎಕರೆ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಅಸಾಧ್ಯ, 40 ಎಕರೆ ಸೇಡಿಯಾಪು ಪ್ರದೇಶದಲ್ಲಿ ಹೊಸ ಕಟ್ಟಡ.ಯೋಜನೆಗೆ ₹200 ಕೋಟಿ ವೆಚ್ಚ ಅಂದಾಜು. ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಸಾಕಾರಗೊಳ್ಳುವ ಹಂತ
300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ…
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಗತ್ಯವಾಗಿರುವ 300 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ನಿರ್ಮಾಣವು ಇದುವರೆಗೆ ಕಡತ ವರ್ಗಾವಣೆಯ ಸ್ಥಗಿತದಿಂದ ವಿಳಂಬವಾಗಿತ್ತು. ಈಗ, ಆರೋಗ್ಯ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿ ಈ ಕಡತವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದೆ. ಇದರೊಂದಿಗೆ ಸೇಡಿಯಾಪುವಿನ 40 ಎಕರೆ ಭೂಮಿಯಲ್ಲಿ ಹೊಸ ಆಸ್ಪತ್ರೆ ನಿರ್ಮಿಸಲು ದಾರಿ ಸಾಗಿದೆ.
ಕಳೆದ ಬಜೆಟ್‌ನಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರು, ಕಳೆದ ಅಕ್ಟೋಬರ್ 20ರಂದು ಪುತ್ತೂರಿನಲ್ಲಿ ನಡೆದ ಅಶೋಕ ಜನಮನ ಸಮಾವೇಶದಲ್ಲಿ “ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಡಲೇಬೇಕು, ವೆಚ್ಚ ಎಷ್ಟು ಆಗಿದ್ದರೂ ಹಿಂದೇಟು ಇಲ್ಲ” ಎಂದು ಭರವಸೆ ನೀಡಿದ್ದರು.
ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಆಸ್ಪತ್ರೆ ನಿರ್ಮಿಸಲು ಕನಿಷ್ಠ 20 ಎಕರೆ ಜಾಗ ಇರಬೇಕು. ಎರಡು ಜಾಗಗಳಿದ್ದರೆ ಅವುಗಳ ನಡುವೆ 10 ಕಿ.ಮೀ ಗಿಂತ ಹೆಚ್ಚು ಅಂತರ ಇರಬಾರದು. ಪ್ರಸ್ತುತ ಪುತ್ತೂರು ತಾಲೂಕು ಆಸ್ಪತ್ರೆಯು ಕೇವಲ 5.16 ಎಕರೆ ಪ್ರದೇಶದಲ್ಲಿದ್ದು, 300 ಹಾಸಿಗೆಗಳ ಮಾದರಿ ಕಟ್ಟಡ ನಿರ್ಮಿಸಲು ಅದು ಸಾಕಾಗುವುದಿಲ್ಲ.
ಅದೇ ರೀತಿ ಹಾಲಿ ತಾಲೂಕು ಆಸ್ಪತ್ರೆ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿರುವುದರಿಂದ ಅದನ್ನು ಮೆಡಿಕಲ್ ಕಾಲೇಜು ಮಾನದಂಡಗಳಿಗೆ ಹೊಂದುವಂತೆ ಹೆಚ್ಚುವರಿ ನಿರ್ಮಾಣ ಮಾಡಲು ನಿಯಮಾತ್ಮಕ ಅಡ್ಡಿಯಿತ್ತು. ಈ ಕಾರಣಕ್ಕಾಗಿ ಇಡೀ ಯೋಜನೆಯ ಕಡತವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ.
ಸೇಡಿಯಾಪು ಪ್ರದೇಶದಲ್ಲಿ ಲಭ್ಯವಿರುವ 40 ಎಕರೆ ಜಾಗದಲ್ಲಿ ನೂತನ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಮಾದರಿಯ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಅಂದಾಜು ₹200 ಕೋಟಿಗಳಷ್ಟು ಮೊತ್ತ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಮಧ್ಯಭಾಗದಲ್ಲಿರುವ ಇರುವ ತಾಲೂಕು ಆಸ್ಪತ್ರೆ ದಿನಕ್ಕೆ ಸರಾಸರಿ 500 ಹೊರರೋಗಿಗಳನ್ನು ಮತ್ತು 70 ಒಳರೋಗಿಗಳನ್ನು ನೋಡಿಕೊಳ್ಳುತ್ತದೆ. ಮಳೆಯ ಕಾಲದಲ್ಲಿ ಅಥವಾ ಸರ್ವಸಾಮಾನ್ಯ ಪರಿಸ್ಥಿತಿಯಲ್ಲಿಯೂ ಕೆಲವೊಮ್ಮೆ 100ಕ್ಕಿಂತ ಹೆಚ್ಚು ರೋಗಿಗಳು ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸ್ಥಳಾಭಾವದ ಕಾರಣದಿಂದ ಬೇರೆ ರೋಗಿಗಳನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಬೇಕಾಗುತ್ತದೆ.
ಪ್ರತಿ ತಿಂಗಳು 90 ಶಸ್ತ್ರಚಿಕಿತ್ಸೆಗಳು ಮತ್ತು 100 ಹೆರಿಗೆಗಳು ನಡೆಯುವ ಈ ಆಸ್ಪತ್ರೆಯ ಜಾಗ 5.16 ಎಕರೆ ಮಾತ್ರ. ಇದರಿಂದ ಹೆಚ್ಚು ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ದೊಡ್ಡ ಅಡ್ಡಿ ಆಗಿತ್ತು.
ಪುತ್ತೂರು ಮೆಡಿಕಲ್ ಕಾಲೇಜು ಕನಸು ಈಗ ಸರ್ಕಾರದ ಸೂಕ್ತ ಕ್ರಮಗಳಿಂದ ಮತ್ತೊಂದು ಹಂತ ಮುಂದಕ್ಕೆ ಸಾಗಿದ್ದು, ಶೀಘ್ರದಲ್ಲೇ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಮತ್ತು ತಾಂತ್ರಿಕ ಪ್ರಕ್ರಿಯೆಗಳು ವೇಗ ಪಡೆಯುವ ನಿರೀಕ್ಷೆಯಿದೆ.

